ಕೇಪ್ ಕೆನರಾವಲ್(ಅಮೆರಿಕ): ಎಲ್ಲ ಸಮುದ್ರಗಳು ಹಾಗೂ ಭೂಮಿಯ ವಾತಾವರಣ ಕುರಿತು ಕೂಲಂಕಷ ಅಧ್ಯಯನ ನಡೆಸುವ ಉದ್ದೇಶದ, ನಾಸಾದ ಉಪಗ್ರಹವನ್ನು ಸ್ಪೇಸ್ ಎಕ್ಸ್ ಗುರುವಾರ ಉಡ್ಡಯನ ಮಾಡಿದೆ.
‘ಪೇಸ್’ ಹೆಸರಿನ ಈ ಉಪಗ್ರಹವನ್ನು ಹೊತ್ತ ಫಾಲ್ಕನ್ ರಾಕೆಟ್, ದಕ್ಷಿಣ ಧ್ರುವದತ್ತ ಹಾರಿ, ನಂತರ ಭೂಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿದೆ ಎಂದು ಮೂಲಗಳು ಹೇಳಿವೆ.
‘ಅಪರೂಪದ ಕಕ್ಷೆಯೊಂದಕ್ಕೆ ಈ ಉಪಗ್ರಹವನ್ನು ಸೇರಿಸಲಾಗಿದೆ. ಹೀಗಾಗಿ, ಭೂಗ್ರಹದ ಅಭೂತಪೂರ್ವ ವೀಕ್ಷಣೆ ಸಾಧ್ಯವಾಗಲಿದೆ’ ಎಂದು ಈ ಬಾಹ್ಯಾಕಾಶ ಯೋಜನೆಯ ವಿಜ್ಞಾನಿ ಜೆರೆಮಿ ವರ್ಡೆಲ್ ಹೇಳಿದ್ದಾರೆ.
ಈ ಉಪಗ್ರಹವು ಕನಿಷ್ಠ ಮೂರು ವರ್ಷಗಳ ಕಾಲ ಕಕ್ಷೆಯಲ್ಲಿದ್ದು ಸಾಗರಗಳು ಹಾಗೂ ಭೂಮಿಯ ವಾತಾವರಣದ ಅಧ್ಯಯನ ನಡೆಸಲಿದೆ. ತನ್ನಲ್ಲಿರುವ ಎರಡು ವಿಶೇಷ ಸಾಧನಗಳ ಮೂಲಕ, ಪ್ರತಿದಿನ ಭೂಗೋಳದ ಪರಿಶೀಲನೆ ನಡೆಸಲಿದ್ದರೆ ಮೂರನೇ ಸಾಧನದಿಂದ ತಿಂಗಳಿಗೊಮ್ಮೆ ದತ್ತಾಂಶ ಸಂಗ್ರಹ ನಡೆಸುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ, ಭೂವೀಕ್ಷಣೆಗಾಗಿ ಉಡ್ಡಯನ ಮಾಡಲಾಗಿರುವ ಉಪಗ್ರಹಗಳು 7 ರಿಂದ 8 ಬಣ್ಣಗಳನ್ನು ಮಾತ್ರ ಗುರುತಿಸುವ ಸಾಮರ್ಥ್ಯ ಹೊಂದಿವೆ. ‘ಪೇಸ್’ ಉಪಗ್ರಹವು 200 ಬಣ್ಣಗಳನ್ನು ಗುರುತಿಸಬಲ್ಲದು. ಹೀಗಾಗಿ, ಸಾಗರದಲ್ಲಿರುವ ವಿವಿಧ ಬಗೆಯ ಪಾಚಿ ಹಾಗೂ ಗಾಳಿಯಲ್ಲಿ ತೇಲುವ ಸೂಕ್ಷ್ಮ ಕಣಗಳನ್ನು ಗುರುತಿಸಲು ವಿಜ್ಞಾನಿಗಳಿಗೆ ಇದು ನೆರವಾಗಲಿದೆ ಎಂದು ವರ್ಡೆಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.