ವಾಷಿಂಗ್ಟನ್:ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕೆ ನಾಸಾ ಉಡಾಯಿಸಿದ್ದ ಅಪಾರ್ಚುನಿಟಿ ರೋವರ್ ಬಾಹ್ಯಾಕಾಶ ನೌಕೆಯು ತನ್ನ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ (ಸಾವನ್ನಪ್ಪಿರುವ) ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
15 ವರ್ಷಗಳಿಂದ ಮಂಗಳನ ಅಂಗಳದಲ್ಲಿ ಚಟುವಟಿಕೆ ನಿರತವಾಗಿದ್ದ ರೋವರ್, ಕಳೆದ ವರ್ಷ ಜೂನ್ 10ರ ನಂತರ ಯಾವುದೇ ಸಂದೇಶವನ್ನು ನಾಸಾಗೆ ರವಾನಿಸಿಲ್ಲ. ಅಪಾರ ಪ್ರಮಾಣದ ದೂಳಿನ ಪರಿಣಾಮ ನೌಕೆಯು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಸೌರಫಲಕಗಳ ಮೇಲೆ ಹೆಚ್ಚು ದೂಳು ಬಿದ್ದಿದ್ದರಿಂದ ಸೌರವಿದ್ಯುತ್ ಬ್ಯಾಟರಿಗಳಿಗೆ ಅಗತ್ಯ ಶಕ್ತಿ ಪೂರೈಕೆಯಾಗದ ಕಾರಣ ನೌಕೆಯು ಸ್ಥಗಿತಗೊಂಡಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಅಪಾರ್ಚುನಿಟಿ ರೋವರ್ ಸಂಪರ್ಕಿಸಲು ತಜ್ಞರ ತಂಡ ಸತತ ಪ್ರಯತ್ನ ನಡೆಸಿದರೂ ಯಾವುದೇ ಫಲ ಸಿಗಲಿಲ್ಲ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನೌಕೆಯನ್ನು 2003ರಲ್ಲಿ ಫ್ಲೊರಿಡಾದಿಂದ ಉಡಾವಣೆಗೊಳಿಸಲಾಗಿತ್ತು. 2004ರ ಜನವರಿ 24ರಂದು ತನ್ನ ಮೊದಲ ಸಂದೇಶವನ್ನು ಭೂಮಿಗೆ ಕಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.