ADVERTISEMENT

ಕ್ಷುದ್ರಗ್ರಹದ ಅವಶೇಷಗಳೊಂದಿಗೆ ಭೂಮಿಯತ್ತ ಹೊರಟ ನಾಸಾ ಬಾಹ್ಯಾಕಾಶ ನೌಕೆ

ಏಜೆನ್ಸೀಸ್
Published 11 ಮೇ 2021, 9:32 IST
Last Updated 11 ಮೇ 2021, 9:32 IST
ಒಸಿರಿಕ್ಸ್‌–ರೆಕ್ಸ್‌(ಸಂಗ್ರಹ ಚಿತ್ರ)
ಒಸಿರಿಕ್ಸ್‌–ರೆಕ್ಸ್‌(ಸಂಗ್ರಹ ಚಿತ್ರ)   

ಕೇಪ್‌ಕೆನವೆರಲ್‌ (ಅಮೆರಿಕ): ‘ಬೆನ್ನು’ ಹೆಸರಿನ ಕ್ಷುದ್ರಗ್ರಹದ ಅವಶೇಷಗಳನ್ನು ತನ್ನೊಳಗೆ ಸೇರಿಸಿಕೊಂಡ ನಾಸಾದ ಒಸಿರಿಸ್‌–ರೆಕ್ಸ್‌ ಬಾಹ್ಯಾಕಾಶ ನೌಕೆ ಸೋಮವಾರ ಭೂಮಿಯತ್ತ ಹೊರಟಿದ್ದು, ಎರಡು ವರ್ಷಗಳ ಬಳಿಕ ಭೂಮಿ ತಲುಪಲಿದೆ.

ಈ ಬಾಹ್ಯಾಕಾಶ ನೌಕೆ 2018 ರಲ್ಲಿ ‘ಬೆನ್ನು‘ ಎಂಬ ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ತಲುಪಿ, ಎರಡು ವರ್ಷಗಳ ಕಾಲ ಆ ಪ್ರದೇಶದಲ್ಲಿ ಸುತ್ತಾಡಿತ್ತು. ಅಲ್ಲಿಂದ ಹೊರಡುವ ಮೊದಲು ಗ್ರಹದ ಮೇಲ್ಮೈನಿಂದ ಕಲ್ಲು ಮಣ್ಣುಗಳನ್ನು ಸಂಗ್ರಹಿಸಿತ್ತು.

ಅರಿಝೋನಾ ವಿಶ್ವವಿದ್ಯಾಲಯದ ಮುಖ್ಯವಿಜ್ಞಾನಿ ಡಾಂಟೆ ಲಾರೆಟ್ಟಾ ಅವರು, ಈ ಬಾಹ್ಯಾಕಾಶ ನೌಕೆ, ಅರ್ಧ ಪೌಂಡ್‌ ಮತ್ತು 1 ಪೌಂಡ್‌(200 ಗ್ರಾಂ ಮತ್ತು 400 ಗ್ರಾಂ) ನಡುವಿನ ತೂಕದ ವಸ್ತುವನ್ನು ಹಿಡಿದುಕೊಳ್ಳುವ ಸಾಮರ್ಥ್ಯವಿದೆ ಎಂದು ಅಂದಾಜಿಸಿದ್ದಾರೆ. ಈ ನೌಕೆ ಹೊತ್ತುತರುವ ಸಣ್ಣ ತುಣುಕು ಸಹ ಬಹಳ ಮಹತ್ವದ್ದಾಗಿದ್ದು, ಚಂದ್ರನ ಮೇಲಿನ ಅವಶೇಷ ಬಿಟ್ಟರೆ ಭೂಮಿ ಸ್ವೀಕರಿಸುವ ಇನ್ನೊಂದು ಗ್ರಹದ ಅವಶೇಷ ಇದಾಗಿರುತ್ತದೆ.

ADVERTISEMENT

ನಾಸಾದ ಈ ಹಿಂದಿನ ಪ್ರಯತ್ನಗಳಲ್ಲಿ ಧೂಮಕೇತುವಿನ ದೂಳನ್ನು ಮತ್ತು ಸೌರ ಗಾಳಿ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಕ್ಷದ್ರಗ್ರಹವೊಂದರ ಅವಶೇಷದ ಸಣ್ಣ ಕಣವನ್ನು ಜಪಾನ್‌ ಸಂಗ್ರಹಿಸಿತ್ತು. ವಿಜ್ಞಾನಿಗಳು ಅಂದಾಜಿಸಿದಂತೆ ಅರ್ಧ ಪೌಂಡ್‌ ಅಥವಾ ಒಂದು ಪೌಂಡ್‌ ತೂಕದ ‘ಬೆನ್ನು’ ಕ್ಷುದ್ರಗ್ರಹದ ಮಣ್ಣನ್ನುಒಸಿರಿಸ್‌–ರೆಕ್ಸ್‌ ಹೊತ್ತು ತಂದರೆ, ಮುಂದೆ ಇನ್ನಷ್ಟು ಸಂಶೋಧನೆಗಳಿಗೆ ಉತ್ತೇಜನ ನೀಡಲಿದೆ.

ಬೆನ್ನು ಕ್ಷುದ್ರಗ್ರಹ 1,600 ಅಡಿ ಅಗಲವಿದ್ದು, ಅದು 4.5 ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬೇಕು ಎಂದು ಅಂದಾಜಿಸಲಾಗಿದೆ. ಇದು ಇನ್ನೊಂದು ಕ್ಷುದ್ರಗ್ರಹದ ಒಡೆದ ಚೂರು ಎಂದು ಹೇಳಲಾಗುತ್ತಿದೆ. ಇದು ಭೂಮಿಗಿಂತ 287 ದಶಲಕ್ಷ ಕಿಲೋಮೀಟರ್‌ ದೂರದಲ್ಲಿದ್ದು, ಈ ನೌಕೆ 2023ರ ಸೆಪ್ಟೆಂಬರ್‌ 24ರಂದು ಭೂಮಿಗೆ ಮರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.