ADVERTISEMENT

ಪಾಕಿಸ್ತಾನ ಸಂಸತ್‌ ವಿಸರ್ಜನೆ: 3 ತಿಂಗಳಲ್ಲಿ ಚುನಾವಣೆಗೆ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 20:01 IST
Last Updated 3 ಏಪ್ರಿಲ್ 2022, 20:01 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ಇಮ್ರಾನ್‌ ಖಾನ್‌ ಭಾನುವಾರ ವಿಫಲಗೊಳಿಸಿದ್ದಾರೆ. ಸಂಸತ್ತು ವಿಸರ್ಜನೆಗೆ ಅಧ್ಯಕ್ಷ ಆರಿಫ್‌ ಅಲ್ವಿ ಅವರ ಅನುಮೋದನೆಯನ್ನು ಇಮ್ರಾನ್‌ ಪಡೆದುಕೊಂಡಿದ್ದಾರೆ. ಹೀಗಾಗಿ, ಮೂರು ತಿಂಗಳಲ್ಲಿ ಪಾಕಿಸ್ತಾನ ಸಂಸತ್ತಿಗೆ ಚುನಾವಣೆ ನಡೆಯಲಿದೆ.

ಪಾಕಿಸ್ತಾನದ ಸಂಸತ್ತು ‘ನ್ಯಾಷನಲ್‌ ಅಸೆಂಬ್ಲಿ’ಯು ಭಾನುವಾರ ಭಾರಿ ಪ್ರಹಸನಕ್ಕೆ ಸಾಕ್ಷಿಯಾಯಿತು. ಇಮ್ರಾನ್‌ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಲು ಉಪ ಸ್ಪೀಕರ್‌ ನಿರಾಕರಿಸಿದರು. ಅವಿಶ್ವಾಸ ನಿರ್ಣಯವು ಅಸಾಂವಿಧಾನಿಕ ಎಂದು ಅವರು ಹೇಳಿದರು. ಇದೇ ಹೊತ್ತಿಗೆ, ಸುದ್ದಿವಾಹಿನಿಯಲ್ಲಿ ಕಾಣಿಸಿಕೊಂಡ ಇಮ್ರಾನ್‌ ಖಾನ್‌, ಪಾಕಿಸ್ತಾನದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ನಡೆಸುತ್ತಿವೆ ಎಂದು ದೂರಿದರು.

‘ಸಂಸತ್ತನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದೇನೆ. ಚುನಾವಣೆ ನಡೆಯಲಿ. ಏನು ಬೇಕು ಎಂಬು
ದನ್ನು ದೇಶವು ತೀರ್ಮಾನಿಸಲಿ’ ಎಂದು ಇಮ್ರಾನ್‌ ಹೇಳಿದರು.ಪಾಕಿಸ್ತಾನದ ಯಾವ ಪ್ರಧಾನಿಯೂ ಅವಧಿ ಪೂರ್ಣಗೊಳಿಸಿದ ಇತಿಹಾಸ ಇಲ್ಲ. 2018ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್‌ ಅವರು ತಮ್ಮ ಆಳ್ವಿಕೆಯ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಿದ್ದಾರೆ.

ಅವಿಶ್ವಾಸನಿರ್ಣಯವನ್ನು ಸಂಸತ್ತು ಭಾನುವಾರ ಚರ್ಚೆಗೆ ಎತ್ತಿಕೊಳ್ಳಬೇಕಿತ್ತು. ಅವಿಶ್ವಾಸ ನಿರ್ಣಯ ಅಂಗೀಕಾರವಾಗುವ ಸಾಧ್ಯತೆಯೇ ದಟ್ಟವಾಗಿತ್ತು. ಆದರೆ, ಇಮ್ರಾನ್‌ ನಿಷ್ಠರಾಗಿರುವ ಉಪ ಸ್ಪೀಕರ್‌ ಅವರು ನಿರ್ಣಯವನ್ನು ಸ್ವೀಕರಿಸಲು ನಿರಾಕರಿಸಿದರು. ಇದು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

1992ರಲ್ಲಿ ಪಾಕಿಸ್ತಾನವು ಕ್ರಿಕೆಟ್‌ ವಿಶ್ವಕಪ್‌ ಗೆದ್ದ ತಂಡದ ನಾಯಕರಾಗಿದ್ದ ಇಮ್ರಾನ್‌ ಅವರು ತಮ್ಮ ಕೈಯಲ್ಲಿ ಇನ್ನೂ ಅಸ್ತ್ರಗಳಿವೆ ಎಂದು ಶನಿವಾರ ಹೇಳಿದ್ದರು. ಅದರಂತೆ, ಸಂಸತ್ತು ವಿಸರ್ಜನೆಯ ಶಿಫಾರಸಿನ ಮೂಲಕ ವಿರೋಧ ಪಕ್ಷಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ.

‘ಪಾಕಿಸ್ತಾನದ ಸಾಂವಿಧಾನಿಕ ಇತಿಹಾಸದಲ್ಲಿ ಈ ದಿನವು ಕರಾಳ ದಿನವಾಗಿ ದಾಖಲಾಗಲಿದೆ’ ಎಂದು ವಿರೋಧ ಪಕ್ಷದ ನಾಯಕ ಶಾಬಾಝ್‌ ಶರೀಫ್‌ ಹೇಳಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಗೆಲುವಾದರೆ, ಶರೀಫ್‌ ಅವರು ಪ್ರಧಾನಿ ಹುದ್ದೆಗೆ ಏರುವುದು ಖಚಿತವಾಗಿತ್ತು.

ಬಹುಮತ ಇಲ್ಲ?

ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯ ಬಲ 342. ಇಮ್ರಾನ್ ನೇತೃತ್ವದ ಹಲವು ಪಕ್ಷಗಳ ಮೈತ್ರಿಕೂಟವು ಅಧಿಕಾರದಲ್ಲಿದೆ. ಆದರೆ, ಮಿತ್ರಪಕ್ಷಗಳ ಏಳು ಸಂಸದರು ಸರ್ಕಾರದ ವಿರುದ್ಧ ಮತ ಹಾಕುವುದಾಗಿ ಘೋಷಿಸಿದ್ದರು. ಇಮ್ರಾನ್ ಅವರ ಪಕ್ಷ ಪಾಕಿಸ್ತಾನ್‌ ತೆಹ್ರಿಕ್‌ ಎ ಇನ್ಸಾಫ್‌ನ ಹತ್ತಕ್ಕೂ ಹೆಚ್ಚು ಸಂಸದರು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವುದಾಗಿ ಹೇಳಿದ್ದರು.

ವಿದೇಶಿ ಸಂಚಿನ ಆರೋಪ

ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಕ್ಕೆ ಇಳಿಸುವುದಕ್ಕಾಗಿ ವಿದೇಶಿ ಶಕ್ತಿಗಳು ಯತ್ನಿಸುತ್ತಿವೆ ಎಂದು ಇಮ್ರಾನ್‌ ಅವರು ಕೆಲ ದಿನಗಳಿಂದ ಹೇಳುತ್ತಲೇ ಇದ್ದಾರೆ. ರಷ್ಯಾ ಮತ್ತು ಚೀನಾಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆ ದೇಶಗಳ ಪರವಾಗಿ ಮತ್ತು ಪಶ್ಚಿಮದ ದೇಶಗಳ ವಿರುದ್ಧ ನಿಲುವು ತಳೆದಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ಪಾಕಿಸ್ತಾನದ ವ್ಯವಹಾರಗಳಲ್ಲಿ ಅಮೆರಿಕವು ಕೈಯಾಡಿಸುತ್ತಿದೆ ಎಂದು ಅವರು ಗುರುವಾರ ಆರೋಪಿಸಿದ್ದರು.

ಇಮ್ರಾನ್‌ ಅವರು ಅಧಿಕಾರದಿಂದ ಕೆಳಕ್ಕೆ ಇಳಿದರೆ, ಅಮೆರಿಕ–‍ಪಾಕಿಸ್ತಾನ ಸಂಬಂಧ ಉತ್ತಮಗೊಳ್ಳಲಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂಬ ಮಾಹಿತಿ ಇರುವ ಪತ್ರವನ್ನು ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿಯು ಇಮ್ರಾನ್ ಅವರಿಗೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಈ ಆರೋಪದಲ್ಲಿ ಯಾವುದೇ ಹುರುಳು ಇಲ್ಲ ಎಂದು ಅಮೆರಿಕದ ವಿದೇಶಾಂಗ ವಕ್ತಾರ ನೆಡ್‌ ಪ್ರೈಸ್ ಅವರು ಕಳೆದ ವಾರವೇ ಹೇಳಿದ್ದರು.

ಕೋರ್ಟ್‌ ಮಧ್ಯಪ್ರವೇಶ

ಪ್ರಧಾನಿ ಇಮ್ರಾನ್‌ ಮತ್ತು ಅಧ್ಯಕ್ಷ ಅಲ್ವಿ ಅವರುಸಂಸತ್ತು ವಿಸರ್ಜನೆಗೆ ಸಂಬಂಧಿಸಿ ನಡೆಸುವ ಎಲ್ಲ ಚಟುವಟಿಕೆಗಳು ಮತ್ತು ನೀಡುವ ಆದೇಶಗಳು ನ್ಯಾಯಾಲಯದ ಪರಿಶೀಲನೆಗೆ ಒಳಪಡಲಿವೆ ಎಂದು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್‌ ಅತಾ ಬಂದ್ಯಾಲ್‌ ಹೇಳಿದ್ದಾರೆ.

ಉಮರ್‌ ಅವರು ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮೂವರು ನ್ಯಾಯಮೂರ್ತಿಗಳ ಪೀಠವು ಆರಂಭಿಕ ವಿಚಾರಣೆ ನಡೆಸಿದೆ. ಅಧ್ಯಕ್ಷ ಅಲ್ವಿ ಮತ್ತು ಸಂಸತ್ತಿನ ಉಪ ಸ್ಪೀಕರ್‌ಗೆ ನೋಟಿಸ್ ನೀಡಲಾಗಿದೆ. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.