ವಾಷಿಂಗ್ಟನ್: ರಷ್ಯಾ ಮತ್ತು ಚೀನಾ ನಡುವಣ ಬಾಂಧವ್ಯ ಬಲಗೊಳ್ಳುತ್ತಿದೆ. ಉಕ್ರೇನ್ ವಿರುದ್ಧದ ರಷ್ಯಾದ ಸಮರದಲ್ಲಿ ‘ನಿರ್ಣಾಯಕ ಪಾತ್ರ’ ವಹಿಸಲು ಚೀನಾ ಮುಂದಾಗುತ್ತಿದೆ. ಈ ಬೆಳವಣಿಗೆಗಳ ಕುರಿತು 32 ರಾಷ್ಟ್ರಗಳ ಸದಸ್ಯತ್ವದ ಮೈತ್ರಿಕೂಟ ‘ನ್ಯಾಟೊ’ ತೀವ್ರ ಕಳವಳ ವ್ಯಕ್ತಪಡಿಸಿದೆ.
ಉತ್ತರ ಅಂಟ್ಲಾಟಿಕ್ ಮಂಡಳಿಯ (ಎನ್‌ಎಸಿ) 75ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕಾಗಿ ಇಲ್ಲಿ ಸೇರಿದ್ದ ನ್ಯಾಟೊ ಸದಸ್ಯ ರಾಷ್ಟ್ರಗಳ ಮುಖಂಡರು ಈ ವಿಷಯ ಚರ್ಚಿಸಿದ್ದು, ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ.
‘ಚೀನಾದ ಮಹಾತ್ವಾಕಾಂಕ್ಷೆ ಮತ್ತು ದಬ್ಬಾಳಿಕೆಯ ನೀತಿಗಳು ನಮ್ಮ ಹಿತಾಸಕ್ತಿ, ಭದ್ರತೆ, ಮೌಲ್ಯಗಳಿಗೆ ಸವಾಲು ಒಡ್ಡುತ್ತಿವೆ. ರಷ್ಯಾ–ಚೀನಾ ಸಂಬಂಧ ಗಟ್ಟಿಯಾಗುತ್ತಿರುವುದು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆ ಬದಲಿಸುವ ಯತ್ನವೂ ಆಗಿದೆ’ ಎಂದು ಇಲ್ಲಿ ನಡೆದ ಮುಖಂಡರ ಶೃಂಗಸಭೆ ನಿರ್ಣಯವನ್ನು ಅಂಗೀಕರಿಸಿದೆ.
‘ಸದ್ಯ ರಷ್ಯಾಕ್ಕೆ ಚೀನಾ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಜೊತೆಗೆ ‘ಗಡಿಯಿಲ್ಲದ’ ಪಾಲುದಾರಿಕೆ ಚಟುವಟಿಕೆಗಳಿಂದ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ‘ನಿರ್ಣಾಯಕ ಪಾತ್ರ’ ವಹಿಸಲೂ ಮುಂದಾಗುತ್ತಿದೆ. ಇದು, ರಷ್ಯಾ ತನ್ನ ನೆರೆ ರಾಷ್ಟ್ರಗಳ ಮೇಲೆ ಹೆಚ್ಚಿನ ಬೆದರಿಕೆಯೊಡ್ಡಲು ಕಾರಣವಾಗಿದೆ’ ಎಂದೂ ನ್ಯಾಟೊ ಆತಂಕಪಟ್ಟಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವಾಗಿ ಚೀನಾ, ವಿಶ್ವಸಂಸ್ಥೆಯ ಧ್ಯೇಯೋದ್ದೇಶವನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ನಿಭಾಯಿಸಬೇಕು ಹಾಗೂ ಯುದ್ಧಕ್ಕೆ ಪೂರಕವಾಗಿ ರಷ್ಯಾಗೆ ನೀಡಲಾಗುತ್ತಿರುವ ಎಲ್ಲ ರೀತಿಯ ಪರಿಕರ, ಶಸ್ತ್ರಾಸ್ತ್ರ ಹಾಗೂ ರಾಜಕೀಯ ಬೆಂಬಲವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದೆ.
ಉಕ್ರೇನ್‌ನ ಮೇಲೆ ರಷ್ಯಾ ಪೂರ್ಣಪ್ರಮಾಣದಲ್ಲಿ ದಾಳಿ ನಡೆಸಿರುವುದು ಯೂರೋಪ್–ಅಟ್ಲಾಂಟಿಕ್ ವಲಯದಲ್ಲಿ ಶಾಂತಿ, ಭದ್ರತೆಯ ವಾತಾವರಣವನ್ನು ಛಿದ್ರಗೊಳಿಸಿದೆ. ಜಾಗತಿಕ ಭದ್ರತೆಗೂ ದಕ್ಕೆ ಉಂಟುಮಾಡಿದೆ. ಮೈತ್ರಿಕೂಟದ ಭದ್ರತೆಗೂ ರಷ್ಯಾ ನೇರ ಬೆದರಿಕೆಯೊಡ್ಡುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟೆನ್‌ಬರ್ಗ್, ‘ನ್ಯಾಟೊ ಮೈತ್ರಿಕೂಟವು ಇಂಡೊ–ಪೆಸಿಫಿಕ್ ವಲಯದ ಜೊತೆಗಿನ ಪಾಲುದಾರಿಕೆಗೆ ಬದ್ಧವಾಗಿದೆ. ಉಕ್ರೇನ್‌ಗೆ ಬೆಂಬಲವು ಮುಂದುವರಿಯಲಿದೆ. ಅದು ಭದ್ರತೆ ಹಿತಾಸಕ್ತಿಯ ರಕ್ಷಣೆಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.