ಲಾಹೋರ್: ‘ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ತಾವು 1999ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಇಸ್ಲಾಮಾಬಾದ್ ಮುರಿಯಿತು’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಹೇಳಿದ್ದಾರೆ.
‘1998ರ ಮೇ 28ರಂದು ಪಾಕಿಸ್ತಾನ ಐದು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿತು. ಅದಾದ ಮೇಲೆ ವಾಜಪೇಯಿ ಸಾಹೇಬರು ಇಲ್ಲಿಗೆ ಬಂದು, ನಮ್ಮ ಜತೆ ಒಪ್ಪಂದ ಮಾಡಿಕೊಂಡರು. ಆ ಒಪ್ಪಂದವನ್ನು ನಾವೇ ಮುರಿದೆವು. ಅದು ನಮ್ಮದೇ ತಪ್ಪು’ ಎಂದು ಅವರು ಪಾಕಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಾಮಾನ್ಯ ಪರಿಷತ್‌ನಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ.
ಉಭಯ ದೇಶಗಳ ನಡುವೆ ಶಾಂತಿ, ಸೌಹಾರ್ದ ಸ್ಥಾಪಿಸಲು 1999ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪಾಕಿಸ್ತಾನದ ಆಗಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿರ್ಧಾರದಿಂದಾಗಿ ಕೆಲವೇ ತಿಂಗಳುಗಳ ನಂತರ ಕಾರ್ಗಿಲ್ ಯುದ್ಧ ನಡೆಯುವ ಪರಿಸ್ಥಿತಿಯನ್ನು ಪಾಕ್ ಸೃಷ್ಟಿಸಿತು ಎಂದು ನೆನಪಿಸಿಕೊಂಡಿದ್ದಾರೆ.
‘ಅಣ್ವಸ್ತ್ರ ಪರೀಕ್ಷೆಗಳನ್ನು ನಿಲ್ಲಿಸಿದರೆ 500 ಕೋಟಿ ಡಾಲರ್ ಹಣವನ್ನು ನೀಡುವುದಾಗಿ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಹೇಳಿದ್ದರು. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ. ಆಗ ನನ್ನ ಸ್ಥಾನದಲ್ಲಿ ಇಮ್ರಾನ್ ಖಾನ್ ಇದ್ದಿದ್ದರೆ ಅದಕ್ಕೆ ಒಪ್ಪಿರುತ್ತಿದ್ದರು’ ಎಂದೂ ಹೇಳಿದ್ದಾರೆ.
ಪಾಕಿಸ್ತಾನವು ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿ 26 ವರ್ಷಗಳು ಸಂದ ಸಂದರ್ಭದಲ್ಲಿ ಅವರು ಈ ರೀತಿ ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.