ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವರ್ತಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ, ಅತಂತ್ರ ಲೋಕಸಭೆಯ ನಿರ್ಮಾಣದಂತ ಪರಿಸ್ಥಿತಿ ಸೃಷ್ಟಿಯಾಗಿದೆ.
ನಗದು ಕೊರತೆಯ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಫೆ. 8ರಂದು ಸಾರ್ವತ್ರಿಕ ಚುನಾವಣ ನಡೆದಿತ್ತು. ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಗಳು 224 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈವರೆಗೂ ಒಟ್ಟಾರೆ ಫಲಿತಾಂಶ ಪ್ರಕಟವಾಗಿಲ್ಲ.
ಮುಸ್ಲಿಂ ಲೀಗ್ ನವಾಜ್ ಪಕ್ಷದ ಮುಖ್ಯಸ್ಥ 74 ವರ್ಷದ ನವಾಜ್ ಷರೀಫ್ ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ‘ತೆಹ್ರೀಕ್ ಎ ಇನ್ಸಾಫ್ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಪಕ್ಷಗಳು ಒಗ್ಗೂಡಿ ರಚಿಸುವ ಸರ್ಕಾರವನ್ನು ತಮ್ಮ ಪಕ್ಷ ಗೌರವಿಸುತ್ತದೆ. ಪಿಎಂಎಲ್–ಎನ್ ಪಕ್ಷವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಾಕಿಸ್ತಾನವನ್ನು ಈಗಿರುವ ಸಂಕಷ್ಟದಿಂದ ಹೊರತರಲು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸುವ ಅಗತ್ಯವಿದೆ’ ಎಂದಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 265ರಲ್ಲಿ 224 ಕ್ಷೇತ್ರಗಳ ಫಲಿತಾಂಶ ಈವರೆಗೂ ಪ್ರಕಟಗೊಂಡಿದೆ. ಪಿಟಿಐ ಬೆಂಬಲಿತ ಸ್ವತಂತ್ರ್ಯ ಅಭ್ಯರ್ಥಿಗಳು 92 ಸ್ಥಾನಗಳನ್ನು ಪಡೆದಿದ್ದಾರೆ. ಪಿಎಂಎಲ್–ಎನ್ 63, ಪಿಪಿಪಿ– 50, ಸಣ್ಣ ಪಕ್ಷಗಳು 19 ಸ್ಥಾನಗಳಲ್ಲಿ ಜಯಗಳಿಸಿವೆ.
ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಸರ್ಕಾರ ರಚಿಸಲು 265ರಲ್ಲಿ 133 ಸ್ಥಾನಗಳನ್ನು ಗೆಲ್ಲಬೇಕು. ಒಟ್ಟು 336 ಸ್ಥಾನಗಳಲ್ಲಿ ಸರಳ ಬಹುಮತ ಪಡೆಯಲು 169 ಸ್ಥಾನಗಳ ಅಗತ್ಯವಿದೆ. ಇದರಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.