ADVERTISEMENT

ಮನುಷ್ಯರ ಚರ್ಮದಿಂದ ಮಾಡಲಾದ ಹಿಟ್ಲರ್‌ ಕಾಲದ ನಾಜಿ ಫೊಟೊ ಆಲ್ಬಮ್‌ ಪತ್ತೆ!

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 9:33 IST
Last Updated 7 ಮಾರ್ಚ್ 2020, 9:33 IST
ಪೋಲೆಂಡ್‌ನಲ್ಲಿ ವಸ್ತು ಸಂಗ್ರಹಕಾರರೊಬ್ಬರಿಗೆ ಸಿಕ್ಕ ಫೊಟೊ ಆಲ್ಬಮ್‌
ಪೋಲೆಂಡ್‌ನಲ್ಲಿ ವಸ್ತು ಸಂಗ್ರಹಕಾರರೊಬ್ಬರಿಗೆ ಸಿಕ್ಕ ಫೊಟೊ ಆಲ್ಬಮ್‌    
""

ಹಿಟ್ಲರ್‌ ಅಧಿಕಾರವಧಿಯಲ್ಲಿ ಜರ್ಮನಿಯಲ್ಲಿದ್ದ ನಾಜಿ ಕ್ಯಾಂಪ್‌ನ ಯುದ್ಧಕೈದಿಗಳ ಚರ್ಮದಿಂದ ಮಾಡಲಾದ ಫೊಟೊ ಆಲ್ಬಮ್‌ ಪೋಲೆಂಡ್‌ನ ಪ್ರಾಚೀನ ವಸ್ತು ಸಂಗ್ರಹಕಾರರೊಬ್ಬರಿಗೆ ಸಿಕ್ಕಿದ್ದು ಸದ್ಯ ಜಗತ್ತನ್ನೇ ತಲ್ಲಣಗೊಳಿಸಿದೆ.

ಫೊಟೊ ಆಲ್ಬಮ್‌ ಮೇಲೆ ಇದ್ದ ಟ್ಯಾಟೂ, ಮನುಷ್ಯನ ರೋಮ ಮತ್ತು ದುರ್ವಾಸನೆಯಿಂದಾಗಿ ಇದು ಮನುಷ್ಯನ ಚರ್ಮದಿಂದ ಮಾಡಲಾದ ವಸ್ತು ಎಂದು ಪತ್ತೆಹಚ್ಚಲಾಗಿದೆ.

ಆಲ್ಬಮ್‌ ಮೇಲಿದ್ದ ಅಚ್ಚೆ ಹಾಗೂ ದುರ್ವಾಸನೆಯಿಂದ ಅನುಮಾನಗೊಂಡ ವ್ಯಕ್ತಿ ಅದನ್ನು ಈ ಹಿಂದೆ ಹಿಟ್ಲರ್‌ನ ಕಾನ್ಸಂಟ್ರೇಷನ್‌ ಕ್ಯಾಂಪ್‌ ಆಗಿದ್ದ ಸದ್ಯ ವಸ್ತು ಸಂಗ್ರಹಾಲಯವಾಗಿರುವ ಆಶ್ವಿಟ್ಜ್ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ತಂದು ಸಿಬ್ಬಂದಿಗೆ ಒಪ್ಪಿಸಿದ್ದಾರೆ. ‘ಇದು ಮನುಷ್ಯನ ಮೇಲಿನ ಕ್ರೌರ್ಯಕ್ಕೆ ಸಾಕ್ಷಿಯಂತಿದೆ,’ ಎಂದು ಹೇಳಿದ್ದ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ.

ADVERTISEMENT

ಫೊಟೊ ಅಲ್ಬಮ್‌ ಮೇಲೆ ಅಧ್ಯಯನ ನಡೆಸಿರುವ ತಜ್ಞರು ಇದು ಬುಚೆನ್‌ವಾಲ್ಡ್ ಕಾನ್ಸಂಟ್ರೇಷನ್‌ ಕ್ಯಾಪ್‌ನಲ್ಲಿ ಹತನಾದ ಯಾವುದೋ ಯುದ್ಧ ಕೈದಿಯ ಚರ್ಚಮದಿಂದ ಮಾಡಲ್ಪಟ್ಟದ್ದು ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ಜರ್ಮನಿ ಹಿಟ್ಲರ್‌ನ ಹಿಡಿತದಿಲ್ಲದ್ದ ಅವಧಿಯಲ್ಲಿ ಯುದ್ಧ ಕೈದಿಗಳ ಮೇಲಿನ ಕ್ರೌರ್ಯದ ಪ್ರಯೋಗಗಳಿಗೆ ಬುಚೆನ್‌ವಾಲ್ಡ್ ಕೈದಿಗಳ ಕ್ಯಾಂಪ್‌ ಕುಖ್ಯಾತಿ ಪಡೆದಿತ್ತು.

ಬುಚೆನ್‌ವಾಲ್ಡ್‌ ಕ್ಯಾಂಪ್‌ನ ಕೈದಿನಗಳ ಮೇಲಿನ ಕ್ರೌರ್ಯಗಳಿಗೆ ಕ್ಯಾಂಪ್‌ನ ಕಮಾಂಡರ್‌ ಕಾರ್ಲ್‌ ಒಟ್ಟೋ ಕೋಚ್‌ ಪತ್ನಿ ಇಲ್ಸೆ ಕೋಚ್‌ ಅವರನ್ನು ಇತಿಹಾಸದಲ್ಲಿ ಹೊಣೆಗಾರರನ್ನಾಗಿಸಲಾಗಿದೆ. ಪುರುಷ ಯುದ್ಧಕೈದಿಗಳ ಚರ್ಮಗಳನ್ನು ವಸ್ತುಗಳ ತಯಾರಿಕೆಗೆ ಬಳಸಿಕೊಳ್ಳುವುದಕ್ಕೂ ಮೊದಲು ಕೈದಿಗಳ ಮೇಲೆ ಆಕರ್ಷಕವಾದ ಅಚ್ಚೆಗಳನ್ನು ಹಾಕಿ ನಂತರ ಕೊಲ್ಲಬೇಕು ಎಂದು ಆಕೆ ಆದೇಶಿಸಿದ್ದಳು ಎಂದು ನಂಬಲಾಗಿದೆ.

ಮನುಷ್ಯರ ಹೆಬ್ಬೆರಳುಗಳನ್ನು ದೀಪದ ಸ್ವಿಚ್‌ಗಳಾಗಿ ಆಕೆ ಬಳಸಿಕೊಂಡಿದ್ದಳು. ಇಷ್ಟೇ ಅಲ್ಲದೇ, ಮನುಷ್ಯನ ಚರ್ಮದಿಂದ ಮಾಡಲ್ಪಟ್ಟ ಹಲವು ವಸ್ತುಗಳನ್ನು ಈಕೆ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇಲ್ಸೆ ಕೋಚ್‌ ಕುಖ್ಯಾತಿಯನ್ನು ಪಡೆದಿದ್ದರು. ಯುದ್ಧ ಕೈದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಬುಚೆನ್‌ವಾಲ್ಡ್‌ ಕ್ಯಾಂಪ್‌ನ ಸಿಬ್ಬಂದಿಗೆ ಆಕೆ ಆದೇಶಿದ್ದಳು ಎಂದು ಹೇಳಲಾಗಿದೆ. ಕೊನೆಗೆ ಯುದ್ಧಕೈದಿಯಾಗಿ ಸಿಕ್ಕಿಬಿದ್ದಿದ್ದ ಆಕೆಯ ಪತಿ ಕಾರ್ಲ್‌ ಒಟ್ಟೊ ಕೋಚ್‌ ಅವರನ್ನು 1944ರಲ್ಲಿ ಗಲ್ಲಿಗೆ ಏರಿಸಲಾಗಿತ್ತು.

1958ರಲ್ಲಿ ಯುದ್ಧ ಅಂತ್ಯಗೊಂಡ ನಂತರ ಅಮೆರಿಕ ಸೇನೆ ಆಕೆಯನ್ನು ಬಂಧಿಸಿತ್ತು. ಆದರೆ, ತಪ್ಪಿಸಿಕೊಳ್ಳಲು ಸಫಲಳಾಗಿದ್ದ ಕೋಚ್‌ ಜರ್ಮನಿಗೆ ಬಂದು ನೆಲೆಸಿದ್ದಳು. ನಂತರದ ವರ್ಷಗಳಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದರು.

ಆಕೆಯ ಕ್ಯಾಂಪ್‌ನಲ್ಲಿ ಪತ್ತೆಯಾಗಿದ್ದ ಮನುಷ್ಯನ ಚರ್ಮದಿಂದ ಮಾಡಲಾದ ವಸ್ತುಗಳಿಗೂ ಈಗ ಪತ್ತೆಯಾಗಿರುವ ಫೊಟೊ ಆಲ್ಬಮ್‌ಗೂ ಎಲ್ಲ ರೀತಿಯಿಂದಲೂ ಸಾಮ್ಯತೆಗಳಿದ್ದು, ಇದು ಬುಚೆನ್‌ವಾಲ್ಡ್‌ ಕ್ಯಾಂಪ್‌ನದ್ದೇ ಎಂದು ನಿರ್ಣಯಕ್ಕೆ ಬರಲಾಗಿದೆ.

‘ಮನುಷ್ಯರ ಚರ್ಮಗಳನ್ನು ವಸ್ತುಗಳಿಗೆ ಬಳಸಿಕೊಳ್ಳುವ ಪ್ರವೃತ್ತಿ ಇದ್ದದ್ದು ಇಲ್ಸೆ ಕೋಚ್‌ ಅವರಲ್ಲಿ ಮಾತ್ರ. ಈಗ ಪತ್ತೆಯಾಗಿರುವ ಅಲ್ಬಮ್‌ ಮತ್ತು ಆಕೆಯ ಕಾಲದ ವಸ್ತುಗಳನ್ನು ಅಧ್ಯಯನ ನಡೆಸಿದಾಗ ಇದು ಆಕೆಯ ಕ್ಯಾಂಪ್‌ನಿಂದಲೇ ತಯಾರಾಗಿ ಬಂದಿದ್ದು ಎಂಬುದು ಗೊತ್ತಾಗಿದೆ, ’ ಎಂದು ಆಶ್ವಿಟ್ಜ್ ವಸ್ತು ಸಂಗ್ರಹಾಲಯದ ಮುಖ್ಯಸ್ಥೆ ಎಲಿಜಬೆತ್‌ ಕೇಜರ್‌ ಅಭಿಪ್ರಾಯಪಟ್ಟಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.