ADVERTISEMENT

ಕರಾಚಿ: 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಪಿಟಿಐ
Published 16 ಜುಲೈ 2023, 12:34 IST
Last Updated 16 ಜುಲೈ 2023, 12:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕರಾಚಿ : ಸಿಂಧ್‌ ಪ್ರಾಂತ್ಯದಲ್ಲಿ 150 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನು ನೆಲಸಮ ಮಾಡಲಾಗಿದೆ.  ಕರಾಚಿಯಲ್ಲಿರುವ ಹಳೆಯ ಮತ್ತು ಅಪಾಯಕಾರಿ ಕಟ್ಟಡ ಎಂದು ಘೋಷಣೆ ಮಾಡಲಾದ ಕಾರಣ ಈ ದೇವಾಲಯವನ್ನು ಕೆಡವಲಾಗಿದ್ದು, ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾರಿ ಮಾತಾ ದೇವಾಲಯವನ್ನು ಕೆಡವಲಾಗಿದೆ. 

‘ಬೆಳಗಿನ ಜಾವದಲ್ಲಿ ದೇವಾಲಯವನ್ನು ಕೆಡವಲಾಗಿದೆ, ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ‘ ಎಂದು ಇಲ್ಲಿಯ ಪಂಚಮುಖಿ ದೇವಾಲಯವನ್ನು ನೋಡಿಕೊಳ್ಳುವ ರಾಮನಾಥ ಮಿಶ್ರಾ ಎನ್ನುವವರು ತಿಳಿಸಿದ್ದಾರೆ. 

ADVERTISEMENT

400 ರಿಂದ 500 ಚದರ ಗಜಗಳಷ್ಟು ಜಾಗದಲ್ಲಿ ಈ ದೇವಾಲಯವಿದೆ. ಈ ಜಾಗವನ್ನು ಕಬಳಿಸಲು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದು ಅಪಾಯಕಾರಿ ಕಟ್ಟಡ ಎಂದು ಘೋಷಣೆಯಾದ ಮೇಲೆಯೇ ಕೆಡವಲಾಗಿದೆ. ಈ ದೇವಸ್ಥಾನವನ್ನು ಮದ್ರಾಸ್‌ ಮೂಲದ ಹಿಂದೂ ಸಮುದಾಯ ಮುನ್ನಡೆಸುತ್ತಿದ್ದು, ಕಟ್ಟಡ ನೆಲಸಮಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ದೇವಾಲಯದ ಆಡಳಿತವು ಪೂರ್ಣಪ್ರಮಾಣವಾಗಿ ಒಪ್ಪದಿದ್ದರೂ ತಾತ್ಕಾಲಿಕವಾಗಿ ಹೆಚ್ಚಿನ ದೇವತೆಗಳನ್ನು ಸಣ್ಣ ಕೋಣೆಗೆ ಸ್ಥಳಾಂತರಿಸಿದ್ದಾರೆ. ಅಲ್ಲಿ ಅವರು ಕೆಲವು ನವೀಕರಣ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು  ಸ್ಥಳೀಯ ಪೊಲೀಸ್‌ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಉದ್ದೇಶಿಸಿ ನಕಲಿ ದಾಖಲೆ ನೀಡಿ ಡೆವಲಪರ್‌ಗೆ ಜಮೀನು ಮಾರಾಟ ಮಾಡಿದ್ದರಿಂದ ಕೆಲ ದಿನಗಳಿಂದ ದೇವಸ್ಥಾನದ ಆಡಳಿತ ಮಂಡಳಿ ಜಾಗ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದೆ ಎನ್ನುತ್ತಾರೆ ಈ ಭಾಗದ ಹಿಂದೂ ಸಮಾಜದ ಮುಖಂಡ ರಮೇಶ್.

ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಷಾ ಮತ್ತು ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರು ಈ ವಿಷಯವನ್ನು ತುರ್ತು ಆಧಾರದ ಮೇಲೆ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಹಿಂದೂ ಕೌನ್ಸಿಲ್‌ಗೆ ಹಿಂದೂ ಸಮುದಾಯ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.