ಕೊಲಂಬೊ: ಶ್ರೀಲಂಕಾ ರಕ್ಷಣಾ ಪಡೆಗಳನ್ನು ತೊರೆದ ಸುಮಾರು 20,000 ಸಿಬ್ಬಂದಿಯನ್ನು ಸೇವೆಯಿಂದ ಅಧಿಕೃತವಾಗಿ ತೆಗೆದುಹಾಕಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
ದೀರ್ಘಾವಧಿಯಿಂದ ಕರ್ತವ್ಯಕ್ಕೆ ಗೈರಾಗಿರುವ ಸಿಬ್ಬಂದಿಗೆ ಡಿಸೆಂಬರ್ 31ರ ವರೆಗೆ ಕ್ಷಮಾದಾನ ನೀಡಲಾಗುವುದು. ನಂತರವೂ ಕರ್ತವ್ಯಕ್ಕೆ ಹಾಜರಾಗದವರನ್ನು ವಜಾ ಮಾಡಲಾಗುತ್ತದೆ. ಮಂಗಳವಾರದ ವೇಳೆಗೆ 19,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ವಕ್ತಾರ ಕರ್ನಲ್ ನಳಿನ್ ಹೆರಾತ್ ತಿಳಿಸಿದ್ದಾರೆ.
ಶ್ರೀಲಂಕಾದ ರಕ್ಷಣಾ ಪಡೆಗಳಲ್ಲಿ 2 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇದ್ದು, ಸೇನಾಪಡೆಯಿಂದ 19,322, ನೌಕಾಪಡೆಯಿಂದ 1,145 ಹಾಗೂ ವಾಯುಪಡೆಯಿಂದ 1,038 ಸಿಬ್ಬಂದಿ ಸೂಚನೆ ಇಲ್ಲದೇ ರಜೆ ಪಡೆದಿದ್ದು ಇವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅವರು ತಿಳಿಸಿದರು.
ಶ್ರೀಲಂಕಾದಲ್ಲಿ ಸೈನಿಕರಿಗೆ ಪಿಂಚಣಿ ಸೌಲಭ್ಯ ಸಿಗಬೇಕಿದ್ದರೆ ಅವರು 22 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಪಿಂಚಣಿ ಸೌಲಭ್ಯ ಬೇಡ ಎಂದು ಹೇಳಿ 12 ವರ್ಷಕ್ಕೇ ಸೇವೆಯಿಂದ ಹೊರಬರುವುದು ಇಲ್ಲಿ ಸಾಧ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.