ಜಿನೆವಾ: ‘ಇಸ್ರೇಲ್ ಹಾಗೂ ಹಮಾಸ್ ನಡುವೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರಲ್ಲಿ ಶೇ 70ರಷ್ಟು ಮಹಿಳೆಯರು ಹಾಗೂ ಮಕ್ಕಳಾಗಿದ್ದು, ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಮೂಲಭೂತ ತತ್ವಗಳ ವ್ಯವಸ್ಥಿತ ಕುಸಿತ’ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.
2023ರ ಅ. 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೇನೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿಶ್ವ ಸಂಸ್ಥೆಯ ಮೂರು ಮೂಲಗಳ ಮೂಲಕ ನಿರಂತರವಾಗಿ ಗಮನಿಸುತ್ತಿದೆ. ಜತೆಗೆ ಸಾವಿನ ಲೆಕ್ಕವನ್ನೂ ಇಡುತ್ತಿದೆ.
13 ತಿಂಗಳ ಈ ಯುದ್ಧದಲ್ಲಿ ಈವರೆಗೂ ಸುಮಾರು 43 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಇಲಾಖೆ ಹೇಳಿದೆ. ಆದರೆ ಮೃತರಲ್ಲಿ 8,119 ಜನರ ಗುರುತು ಮಾತ್ರ ಪತ್ತೆಯಾಗಿದೆ. ಆದರೆ ಮೃತಪಟ್ಟವರಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು 32 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಅಂತರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಗಳ ಆರೋಪಗಳಿಗೆ ಸಂಬಂಧಿಸಿದಂತೆ ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ನ್ಯಾಯಾಂಗ ಸಂಸ್ಥೆಗಳ ಮೂಲಕ ಮೃತಪಟ್ಟವರ ಸರಿಯಾದ ಲೆಕ್ಕಾಚಾರ ನಡೆಸುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಂರಕ್ಷಿಸಿಡಲಾಗುತ್ತಿದೆ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಹೇಳಿದ್ದಾರೆ.
ಈ ಕುರಿತ ಪ್ರತಿಕ್ರಿಯೆಗೆ ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
2023ರಲ್ಲಿ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ಜನರನ್ನು ಕೊಂದು, 250ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಆಕ್ರಮಣ ನಡೆಸಿದ ಇಸ್ರೇಲ್ ಸೇನೆ, ಗಾಜಾದಲ್ಲಿ ನಾಗರಿಕರಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದಾಗಿ ಹೇಳುತ್ತಲಿದೆ.
‘ಸರಿಸುಮಾರು ಪ್ರತಿ ಯೋಧನಿಗಾಗಿ ಒಬ್ಬ ನಾಗರಿಕನ ಹತ್ಯೆಯಾಗಿದೆ. ಇಲ್ಲಿ ಹಮಾಸ್ ದೋಷಿಯಾದರೂ, ಪ್ಯಾಲೆಸ್ಟೀನ್ ಉಗ್ರರ ಗುಂಪು ನಾಗರಿಕರನ್ನು ತನ್ನ ಗುರಾಣಿಯನ್ನಾಗಿಸಿಕೊಂಡಿದೆ. ಆಸ್ಪತ್ರೆಗಳನ್ನೂ ಒಳಗೊಂಡಂತೆ ನಾಗರಿಕರು ಹಾಗೂ ನಾಗರಿಕ ಮೂಲಸೌಕರ್ಯಗಳನ್ನೂ ಉಗ್ರರ ಗುಂಪು ಬಳಸಿಕೊಂಡಿದೆ’ ಎಂದು ಇಸ್ರೇಲ್ ಹೇಳುತ್ತಲೇ ಬಂದಿದೆ.
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಮುಖ್ಯಸ್ಥ ಅಜಿತ್ ಸುಂಘೈ ಮಾಹಿತಿ ನೀಡಿ, ‘ಈ ಯುದ್ಧದಲ್ಲಿ ಮಡಿದವರಲ್ಲಿ ಕನಿಷ್ಠ ಒಂದು ದಿನದ ಮಗು ಹಾಗೂ ಗರಿಷ್ಠ ವಯೋಮಾನದವರಾಗಿ 97 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಶೇ 44ರಷ್ಟಿದ್ದಾರೆ. ಇವರಲ್ಲಿ 5ರಿಂದ 9ರ ವಯೋಮಾನದವರೇ ಹೆಚ್ಚು. 10ರಿಂದ 14ರ ವಯೋಮಾನದವರ ಸಂಖ್ಯೆಯೂ ದೊಡ್ಡದಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.