ADVERTISEMENT

ಸುಸ್ಥಿರ ಭವಿಷ್ಯಕ್ಕಾಗಿ ಪರ್ಯಾಯ ಕೃಷಿ ವಿಧಾನಗಳತ್ತ ಚಿಂತಿಸಬೇಕಿದೆ: ಡಾ. ಶಾಹಿದುರ್‌

ಪಿಟಿಐ
Published 30 ಜೂನ್ 2023, 14:10 IST
Last Updated 30 ಜೂನ್ 2023, 14:10 IST
ಡಾ. ಶಾಹಿದುರ್‌ ರಶೀದ್‌
ಡಾ. ಶಾಹಿದುರ್‌ ರಶೀದ್‌   

ಕಠ್ಮಂಡು: ಭಾರತವು ಅಂತರ್ಜಲ ಬರಿದಾಗದಂತೆ ಹಾಗೂ ಮಣ್ಣಿನ ಸವಕಳಿಯೂ ಆಗದಂತೆ ಪರ್ಯಾಯ ಕೃಷಿ ವಿಧಾನಗಳತ್ತ ಚಿಂತಿಸಬೇಕಾದ ಅಗತ್ಯವಿದೆ ಎಂದು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ನಿರ್ದೇಶಕ ಡಾ. ಶಾಹಿದುರ್‌ ರಶೀದ್‌ ತಿಳಿಸಿದರು.

ನೇಪಾಳದ ಕಠ್ಮಂಡುವಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಆಹಾರ ನೀತಿ ವರದಿ (ಜಿಎಫ್‌ಪಿಆರ್‌) ಬಿಡುಗಡೆ ಸಮಾರಂಭದಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಶಾಖ ಸಹಿಷ್ಣು ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ಮತ್ತು ಸುಸ್ಥಿರ ನೀರಾವರಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆ ಕುರಿತು ಒತ್ತಿ ಹೇಳಿದರು.

ಭತ್ತದ ಕೃಷಿಗೆ ಪ್ರಚಲಿತದಲ್ಲಿರುವ ನೀರು ಹರಿಸುವ ವಿಧಾನದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತದೆ. ಇದರಿಂದ ನೀರಿನ ಸಮರ್ಪಕ ಬಳಕೆಯೂ ಆಗುವುದಿಲ್ಲ. ಇದಕ್ಕೆ ನವೀನ ಮಾದರಿಯ ನೀರಾವರಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ ಮತ್ತು ನೀರಾವರಿಗೆ ಸೌರಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲೂ ಹೆಜ್ಜೆಯಿಡಬೇಕಿದೆ ಎಂದು ಅವರು ತಿಳಿಸಿದರು.

ADVERTISEMENT

ಭಾರತವು ತನ್ನ ಜನಸಂಖ್ಯೆಗೆ ಅಗತ್ಯವಿರುವಷ್ಟು ಆಹಾರ ಉತ್ಪಾದನೆಯನ್ನು ಹೊಂದಿದ್ದರೂ, ಪೌಷ್ಟಿಕಾಂಶ ಮತ್ತು ದೀರ್ಘಾವಧಿಯ ಸ್ಥಿರತೆಯನ್ನು ಖಾತರಿಪಡಿಸುವ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅವರು ವಿವರಿಸಿದರು.

ಹಸಿರು ಕ್ರಾಂತಿಯ ನಂತರ ಅಭಿವೃದ್ಧಿಪಡಿಸಿದ ವ್ಯವಸ್ಥೆಯೇ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೂತನ ತಂತ್ರಜ್ಞಾನಗಳಿಂದ ಕೃಷಿ ಉತ್ಪಾದನೆ ಮತ್ತು ಬೆಳೆ ಇಳುವರಿ ಹೆಚ್ಚಾಯಿತು. ಜತೆಗೆ ಅಂತರ್ಜಲದ ವ್ಯಾಪಕ ಬಳಕೆ ಮತ್ತು ಭಾರೀ ಪ್ರಮಾಣದ ರಾಸಾಯನಿಕ ಗೊಬ್ಬರ ಬಳಕೆಗೂ ಅದು ಕಾರಣವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಅಂತರ್ಜಲ ಖಾಲಿಯಾಗದಂತೆ ಮತ್ತು ಮಣ್ಣು ಸವಕಳಿಯಾಗದಂತೆ ನಾವು ಪರ್ಯಾಯ ಕೃಷಿ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಭವಿಷ್ಯದಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಇದು ದೊಡ್ಡ ಸವಾಲಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ರಶೀದ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.