ಗಾಜಾ/ಜೆರುಸಲೇಂ/ದೋಹಾ: ಗಾಜಾ ಪಟ್ಟಿಯಲ್ಲಿ ಮಾನವೀಯ ದೃಷ್ಟಿಯಿಂದ ಇಸ್ರೇಲ್ ನಾಯಕರು ಹಾಗೂ ಹಮಾಸ್ ಬಂಡುಕೋರರು ಇನ್ನೂ ಎರಡು ದಿನ ಕದನ ವಿರಾಮ ವಿಸ್ತರಣೆಗೆ ಸೋಮವಾರ ಒಪ್ಪಿಗೆ ನೀಡಿದ್ದಾರೆ.
ನಾಲ್ಕು ದಿನಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೇ ಮಧ್ಯಸ್ಥಿಕೆಯ ಹೊಣೆ ಹೊತ್ತಿರುವ ರಾಷ್ಟ್ರಗಳಿಂದ ನಡೆದ ರಾಜತಾಂತ್ರಿಕ ಸಮಾಲೋಚನೆ ಫಲಪ್ರದವಾಗಿದ್ದು, ಕದನ ವಿರಾಮ ವಿಸ್ತರಣೆಯಾಗಿದೆ ಎಂದು ಕತಾರ್ ಹೇಳಿದೆ.
ಹಮಾಸ್ ಬಂಡುಕೋರರು ಮತ್ತೆ ನಾಲ್ಕು ದಿನ ಕದನ ವಿರಾಮ ವಿಸ್ತರಣೆಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ದಿನ ಬಿಟ್ಟು ದಿನ ವಿಸ್ತರಣೆ ಮಾಡುವುದಾಗಿ ಇಸ್ರೇಲ್ ಹೇಳಿತ್ತು ಎಂದು ಈಜಿಪ್ಟ್‌ನ ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಕದನ ವಿರಾಮದ ವೇಳೆ ದಿನವೊಂದಕ್ಕೆ 10 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇದಕ್ಕೆ ಪ್ರತಿಯಾಗಿ ಮೂರರಷ್ಟು ಪ್ಯಾಲೆಸ್ಟೀನ್ ಪ್ರಜೆಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಪುನರುಚ್ಚರಿಸಿದೆ.
ಬಿಡುಗಡೆ ವಿಳಂಬ: ಒಪ್ಪಂದದ ಅನ್ವಯ ಕೊನೆಯ ದಿನದಂದು ಇಸ್ರೇಲ್‌ನ 11 ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಬೇಕಿತ್ತು. ಆದರೆ, ಎರಡೂ ಕಡೆಯಿಂದ ಬಿಡುಗಡೆಯಾಗುವವರ ಪಟ್ಟಿ ಬಗ್ಗೆ ಇಸ್ರೇಲ್ ಮತ್ತು ಹಮಾಸ್‌ನಿಂದ ಸಹಮತ ವ್ಯಕ್ತವಾಗಿಲ್ಲ ಎಂದು ಹೇಳಲಾಗಿದೆ.
‘ಸೋಮವಾರ ಬಿಡುಗಡೆಯಾಗ ಬೇಕಿದ್ದ ಒತ್ತೆಯಾಳುಗಳ ಪಟ್ಟಿ ಬಗ್ಗೆ ಸಮಸ್ಯೆ ತಲೆದೋರಿತ್ತು. ಯಾವುದೇ ವಿಳಂಬ ವಾಗದಂತೆ ಸಮಸ್ಯೆ ಬಗೆಹರಿಸಲೂ ಮಾತುಕತೆ ನಡೆದಿದೆ’ ಎಂದು ಪ್ಯಾಲೆಸ್ಟೀನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಾರಾಗೃಹದಲ್ಲಿರುವ ಪ್ಯಾಲೆಸ್ಟೀನ್ ಪ್ರಜೆಗಳ ಬಿಡುಗಡೆ ಸಂಬಂಧ ಹಮಾಸ್ ಪಟ್ಟಿ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಕಚೇರಿ ಹೇಳಿದೆ.
ಮಸ್ಕ್–ನೆತನ್ಯಾಹು ಮಾತುಕತೆ: ‘ಎಕ್ಸ್’ನಲ್ಲಿ ಯೆಹೂದಿ ಜನಾಂಗದ ವಿರುದ್ಧ ದ್ವೇಷ ಬಿತ್ತುವ ಕಾರ್ಯ ನಡೆದಿದೆ ಎಂಬ ಆರೋಪದ ನಡುವೆಯೇ ಟೆಸ್ಲಾ ಕಂಪನಿಯ ಮುಖ್ಯಸ್ಥ ಇಲಾನ್ ಮಸ್ಕ್ ಅವರು, ಸೋಮವಾರ ಇಸ್ರೇಲ್‌ಗೆ ಭೇಟಿ ನೀಡಿ, ಪ್ರಧಾನಿ ನೆತನ್ಯಾಹು ಸೇರಿದಂತೆ ಪ್ರಮುಖ ನಾಯಕರ ಜೊತೆ ಚರ್ಚಿಸಿದರು.
ಹಮಾಸ್ ಬಂಡುಕೋರರು ಅಕ್ಟೋಬರ್ 7ರಂದು ದಾಳಿ ನಡೆಸಿದ ಇಸ್ರೇಲ್‌ನ ಸಾಮುದಾಯಿಕ ವ್ಯವಸಾಯ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಮಸ್ಕ್ ಜೊತೆಯಲ್ಲಿ, ನೆತನ್ಯಾಹು ಕೂಡ ಇದ್ದರು. ಅಲ್ಲಿನ ಸಂತ್ರಸ್ತರ ಮನೆಗಳಿಗೆ ಇಬ್ಬರೂ ಭೇಟಿ ನೀಡಿದರು.
‘ಜನರ ಹತ್ಯಾಕಾಂಡದ ವಿಡಿಯೊ, ಛಾಯಾಚಿತ್ರಗಳನ್ನು ನೆತನ್ಯಾಹು ತೋರಿದರು. ಈ ದೃಶ್ಯಗಳನ್ನು ನೋಡಿದರೆ ಜೀವನದಲ್ಲಿ ಜಿಗುಪ್ಸೆ ಹುಟ್ಟುತ್ತದೆ’ ಎಂದು ‘ಎಕ್ಸ್’ನಲ್ಲಿ ಮಸ್ಕ್ ಹೇಳಿದ್ದಾರೆ.
ನೆತನ್ಯಾಹು ಭೇಟಿ
ಜೆರುಸಲೇಂ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆಯು ಸಂಪೂರ್ಣ ಹಿಡಿತ ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಭಾನುವಾರ ಗಾಜಾಕ್ಕೆ ಭೇಟಿ ನೀಡಿ ಯೋಧರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಹಮಾಸ್ ಬಂಡುಕೋರರ ಸುರಂಗದ ಬಗ್ಗೆ ಸೇನೆಯ ಕಮಾಂಡರ್‌ಗಳು ಮತ್ತು ಯೋಧರು, ನೆತನ್ಯಾಹು ಅವರಿಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.