ಕಠ್ಮಂಡು: ನೇಪಾಳದ ಪೊಖರಾದಲ್ಲಿ ಪತನವಾದ ಯೇತಿ ಏರ್‌ಲೈನ್ಸ್‌ಗೆ ಸೇರಿದ ಪ್ರಯಾಣಿಕ ವಿಮಾನದ ಬ್ಲ್ಯಾಕ್‌ಬಾಕ್ಸ್ ಅಪಘಾತ ನಡೆದ ಸ್ಥಳದಲ್ಲಿ ಸೋಮವಾರ ಪತ್ತೆಯಾಗಿದೆ.
ವಿಮಾನದಲ್ಲಿ 72 ಜನರು ಪ್ರಯಾಣಿಕರಿದ್ದರು. ಈವರೆಗೆ 69 ಮೃತದೇಹಗಳು ದೊರೆತಿವೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮೂವರ ಶವ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
69 ಮೃತದೇಹಗಳಲ್ಲಿ 41 ಮೃತದೇಹಗಳ ಗುರುತು ಪತ್ತೆ ಮಾಡಲಾಗಿದೆ. ಶೋಧ ಕಾರ್ಯಾಚರಣೆ ಪ್ರಕ್ರಿಯೆ ಸಂಪೂರ್ಣವಾದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಸ್ಕಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಕರ್ತರು 300 ಮೀಟರ್ ಆಳದ ಕಂದಕಕ್ಕೆ ಇಳಿದು ವಿಮಾನದ ಕಾಕ್‌ಪಿಟ್ ಧ್ವನಿಮುದ್ರಕ(ಸಿವಿಆರ್) ಮತ್ತು ವಿಮಾನದ ಡೇಟಾ ರೆಕಾರ್ಡರ್ ಅನ್ನು(ಎಫ್‌ಡಿಆರ್) ಹುಡುಕಿ ತಂದಿದ್ದಾರೆ. ರೇಡಿಯೊ ಪ್ರಸರಣ ಮತ್ತು ಕಾಕ್‌ಪಿಟ್‌ನ ಇತರ ಶಬ್ದಗಳನ್ನು ಸಿವಿಆರ್‌ನಲ್ಲಿ ಧ್ವನಿಮುದ್ರಣವಾಗಿರುತ್ತದೆ. ವಿಮಾನದ ವೇಗ, ವಿಮಾನ ಹಾರಾಟದ ಎತ್ತರ, ದಿಕ್ಕು, ಪೈಲಟ್‌ನ ತೆಗೆದುಕೊಂಡ ಕ್ರಮಗಳು ಸೇರಿ ಇತರ 80 ವಿವಿಧ ಬಗೆಯ ಮಾಹಿತಿಗಳು ಎಫ್‌ಡಿಆರ್‌ನಲ್ಲಿ ದಾಖಲಾಗಿರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ನೇಪಾಳ ವಿಮಾನ ಪತನ: ಐವರು ಭಾರತೀಯರೂ ಸೇರಿ 68 ಮಂದಿ ಸಾವು
ಬ್ಲ್ಯಾಕ್ ಬಾಕ್ಸ್‌ಗಳನ್ನು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ (ಸಿಎಎಎನ್) ಒಪ್ಪಿಸಲಾಗಿದೆ ಎಂದು ಯೇತಿ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 10.58ಕ್ಕೆ ಪೊಖಾರಾ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಆಗಬೇಕಿದ್ದ ವಿಮಾನವು, ನಿಲುಗಡೆಗೆ ಕೆಲವೇ ಸೆಕಂಡುಗಳು ಬಾಕಿ ಇರುವಂತೆ ಸೇಟಿ ನದಿಯ ದಡಕ್ಕೆ ಅಪ್ಪಳಿಸಿತು. ಎರಡು ಭಾಗವಾದ ವಿಮಾನದ ಒಂದು ಭಾಗ ನದಿಯ ಕಂದಕದಲ್ಲಿ ಬಿದ್ದರೆ, ಮತ್ತೊಂದು ಭಾಗ ನದಿಯ ದಡದಲ್ಲಿ ಬಿದ್ದಿತು. ಭಾರತದ ಐವರು ಸೇರಿ ಒಟ್ಟು 72 ಮಂದಿ ವಿಮಾನದಲ್ಲಿ ಇದ್ದರು.
ನೇಪಾಳದ ಪತ್ರಕರ್ತನ ದೇಹ ಪತ್ತೆ: ಮೃತಪಟ್ಟವರಲ್ಲಿ ನೇಪಾಳದ ಖ್ಯಾತ ಪತ್ರಕರ್ತ ತ್ರಿಭುವನ್ ಪೌಡ್ಯಾಲ್ ಕೂಡ ಒಬ್ಬರು ಎನ್ನಲಾಗಿದೆ.
ನೇಪಾಳದ ಪತ್ರಕರ್ತರ ಒಕ್ಕೂಟದ (ಎಫ್‌ಎನ್‌ಜೆ) ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ 37 ವರ್ಷದ ಪೌಡ್ಯಾಲ್ ಅವರ ಮೃತದೇಹವನ್ನು ಗುರುತಿಸಲಾಗಿದೆ.
ಲೈವ್ ವಿಡಿಯೊ: ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನ ಪ್ರಯಾಣಿಕರೊಬ್ಬರು ಫೇಸ್‌ಬುಕ್ ಲೈವ್ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲವೇ ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಪ್ರಯಾಣಿಕರ ಚೀರಾಟ ಹಾಗೂ ಬೆಂಕಿಯ ಜ್ವಾಲೆಗಳನ್ನು ಕಾಣಬಹುದು.
ಉತ್ತರಪ್ರದೇಶದ ಸೋನು ಜೈಸ್ವಾಲ್ ಎಂಬುವರು ಫೇಸ್‌ಬುಕ್ ಲೈವ್ ಮಾಡಿದ್ದರು.
ಅವಘಡದಲ್ಲಿ ಮೃತಪಟ್ಟವರಲ್ಲಿ ಐವರು ಭಾರತೀಯರು ಇದ್ದು, ಅವರಲ್ಲಿ ನಾಲ್ವರು ಪ್ಯಾರಾಗ್ಲೈಡಿಂಗ್‌ಗೆ ಪೊಖರಾಗೆ ಹೊರಟಿದ್ದರು ಎಂದು ಯೇತಿ ಏರ್‌ಲೈನ್ಸ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
17 ವರ್ಷಗಳ ಅಂತರದಲ್ಲಿ ಪೈಲೆಟ್ ದಂಪತಿ ಸಾವು: ಯೇತಿ ಏರ್‌ಲೈನ್ಸ್‌ನ ವಿಮಾನದಲ್ಲಿ ಸಹ ಪೈಲೆಟ್ ಆಗಿದ್ದ ಅಂಜು ಖಾತಿವಾಡ ಅವರು ದುರಂತದಲ್ಲಿ ಮೃತಪಟ್ಟಿದ್ದಾರೆ. ಯೇತಿ ಏರ್‌ಲೈನ್ಸ್‌ನಲ್ಲಿ ಪೈಲೆಟ್ ಆಗಿದ್ದ ಅವರ ಪತಿ ದೀಪಕ್ ಪೊಖಾರೆಲ್ ಅವರು 2006ರಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಮೃತಪಟ್ಟ 17 ವರ್ಷಗಳ ಬಳಿಕ ಅಂಜು ಕೂಡಾ ಅಂಥದ್ದೇ ದುರಂತದಲ್ಲಿ ಮೃತಪಟ್ಟಿದ್ದಾರೆ.
ಈ ಹಿಂದೆ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನ
ನೇಪಾಳದಲ್ಲಿ ಅಪಘಾತಕ್ಕೀಡಾದ ಎಟಿಆರ್– 72 ವಿಮಾನವು ಈ ಹಿಂದೆ ಉದ್ಯಮಿ ವಿಜಯ್ ಮಲ್ಯ ಒಡೆತನದ ಪ್ರಸ್ತುತ ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಮಾಲೀಕತ್ವದಲ್ಲಿತ್ತು ಎಂದು ‘ಸಿರಿಯಮ್ ಫ್ಲೀಟ್ಸ್’ ತಿಳಿಸಿದೆ.
‘ಸಿರಿಯಮ್ ಫ್ಲೀಟ್ಸ್’ ಮಾಹಿತಿಯ ಪ್ರಕಾರ, 9ಎನ್–ಎಎನ್‌ಸಿ ಎಟಿಆರ್–72 ವಿಮಾನವನ್ನು 2007ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಖರೀದಿಸಿತ್ತು. ಆರು ವರ್ಷಗಳ ಬಳಿಕ ಈ ವಿಮಾನವನ್ನು ಥಾಯ್ಲೆಂಡ್‌ನ ನೋಕ್ ಏರ್ ಖರೀದಿಸಿತ್ತು. ಬಳಿಕ ಈ ವಿಮಾನವನ್ನು 2019ರಲ್ಲಿ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಮಾರಾಟ ಮಾಡಲಾಗಿತ್ತು.
ಫ್ರಾನ್ಸ್ ಮತ್ತು ಇಟಲಿಯ ಜಂಟಿ ಸಹಭಾಗಿತ್ವದಲ್ಲಿ ಎಟಿಆರ್ ಕಂಪನಿಯು ಈ ವಿಮಾನವನ್ನು ಅಭಿವೃದ್ಧಿಪಡಿಸಿತ್ತು. ಅವಳಿ ಎಂಜಿನ್ ಟರ್ಬೊಪ್ರೊಪ್ ಹೊಂದಿದ್ದ ‘ಎಟಿಆರ್– 72’ ವಿಮಾನವು ತನ್ನ ಹೆಸರಿನಲ್ಲಿದ್ದ 72 ಸಂಖ್ಯೆಯಷ್ಟೇ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದ ವಿಶಿಷ್ಟ ವಿಮಾನವಾಗಿತ್ತು. ಪ್ರಸ್ತುತ ಈ ವಿಮಾನವನ್ನು ಬುದ್ಧ ಏರ್ ಮತ್ತು ಯೇತಿ ಏರ್‌ಲೈನ್ಸ್ ಮಾತ್ರ ಅಲ್ಪಾವಧಿಯ ಸೇವೆಗೆ ಬಳಸುತ್ತಿದ್ದವು.
‘ಅಸಮರ್ಪಕ ನಿರ್ವಹಣೆ ಅಥವಾ ಪೈಲಟ್‌ನ ಆಯಾಸದ ಕಾರಣದಿಂದಾಗಿ ಭಾನುವಾರ ವಿಮಾನವು ಅಪಘಾತಕ್ಕೀಡಾಗಿರುವ ಸಾಧ್ಯತೆ ಇದೆ’ ಎಂದು ವಿಮಾನ ಅಪಘಾತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಅಪಘಾತ ಸಂಭವಿಸುವ ಕೆಲವೇ ಸೆಕೆಂಡುಗಳ ಮುನ್ನ ಮೊಬೈಲ್ ವಿಡಿಯೊದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಗಮನಿಸಿದರೆ, ವಿಮಾನವು ಕೆಳಗಿಳಿಯುವ ಸಂದರ್ಭದಲ್ಲಿ ಆಕಾಶ ಶುಭ್ರವಾಗಿತ್ತು, ಅಪಘಾತಕ್ಕೀಡಾಗುವ ಮುನ್ನ ವಿಮಾನದ ಮುಂಭಾಗವು ತುಸು ಮೇಲಕ್ಕೆ ಹೋಗಿದೆ. ಬಳಿಕ ರೆಕ್ಕೆಗಳು ಎಡಭಾಗಕ್ಕೆ ಇಳಿಮುಖವಾಗಿದ್ದು, ನಿಷ್ಕ್ರಿಯವಾಗಿರುವ ಸಾಧ್ಯತೆ ಇದೆ’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.