ADVERTISEMENT

ಗಡಿ ಪಾಯಿಂಟ್‌ ತೆರವು: ಚೀನಾಗೆ ನೇಪಾಳ ಆಗ್ರಹ

ನೇಪಾಳ ಉಪ ಪ್ರಧಾನಿ, ಚೀನಾದ ‘ಟಿಬೆಟ್‌ ಸ್ವಾಯತ್ತ ವಲಯ ಸಮಿತಿ’ ಕಾರ್ಯದರ್ಶಿ ಚರ್ಚೆ

ಪಿಟಿಐ
Published 30 ಮಾರ್ಚ್ 2024, 15:53 IST
Last Updated 30 ಮಾರ್ಚ್ 2024, 15:53 IST
<div class="paragraphs"><p>ನೇಪಾಳ ಬಾವುಟ</p></div>

ನೇಪಾಳ ಬಾವುಟ

   

ಕಠ್ಮಂಡು: ‘ಟಿಬೆಟ್ ಸ್ವಾಯತ್ತ ವಲಯದ ಗಡಿಗೆ ಹೊಂದಿಕೊಂಡಿರುವ ಗಡಿಭಾಗದಲ್ಲಿ 14 ಸಾಂಪ್ರದಾಯಿಕ ಪಾಯಿಂಟ್‌ಗಳನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಬೇಕು’ ಎಂದು ನೇಪಾಳ ಸರ್ಕಾರ ಚೀನಾಗೆ ಆಗ್ರಹಪಡಿಸಿದೆ.

ಈ ಗಡಿ ಪಾಯಿಂಟ್‌ಗಳನ್ನು ಕಾರ್ಯಾಚರಣೆಗೆ ತೆರವುಗೊಳಿಸುವುದರಿಂದ ದ್ವಿಪಕ್ಷೀಯ ವಾಣಿಜ್ಯ ಚಟುವಟಿಕೆಗಳು ಹೆಚ್ಚುವ ಜೊತೆಗೆ ಜನರ ಮುಕ್ತ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ನೇಪಾಳ ಪ್ರತಿಪಾದಿಸಿದೆ.

ADVERTISEMENT

ನೇಪಾಳ ಉಪ ಪ್ರಧಾನಿಯೂ ಆದ ವಿದೇಶಾಂಗ ವ್ಯವಹಾರಗಳ ಸಚಿವನಾರಾಯಣ ಕಾಜಿ ಶ್ರೇಷ್ಠ ಅವರು ಈಚೆಗೆ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಟಿಬೆಟ್‌ ಸ್ವಾಯತ್ತ ವಲಯ ಸಮಿತಿ ಕಾರ್ಯದರ್ಶಿ ವಾಂಗ್ ಜುಂಜೆಂಗ್ ಅವರೊಂದಿಗೆ ಈ ಕುರಿತು ಚರ್ಚಿಸಿದರು.

ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೇಷ್ಠ ಅವರ ಪ್ರಥಮ ಚೀನಾ ಭೇಟಿಯಾಗಿದೆ. ನೇಪಾಳ– ಚೀನಾ ಗಡಿ ಭಾಗದ ನಿವಾಸಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಈ ಭೇಟಿ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಲ್ಹಾಸಾದಲ್ಲಿರುವ ನೇಪಾಳ ಕಾನ್ಸುಲೇಟ್‌ ಜನರಲ್‌ ಈ ಕುರಿತಂತೆ ಹೇಳಿಕೆ ನೀಡಿದೆ. ಉಭಯ ಮುಖಂಡರ ಭೇಟಿಯ ಸಂದರ್ಭದಲ್ಲಿ ಶ್ರೇಷ್ಠ ಅವರು ಸಾಂಪ್ರದಾಯಿಕ ಗಡಿ ಪಾಯಿಂಟ್‌ಗಳನ್ನು ಕಾರ್ಯಾಚರಣೆಗೊಳಿಸುವುದರ ಮಹತ್ವ ಕುರಿತು ಗಮನಸೆಳೆದರು ಎಂದು ತಿಳಿಸಿದೆ.

ಚೀನಾದಿಂದ ಗಡಿಯಲ್ಲಿ ‘ಟಿಬೆಟ್‌ ಸ್ವಾಧೀನದ 58 ವರ್ಷಾಚರಣೆ’

ಟಿಬೆಟ್ ಅನ್ನು ಸ್ವಾಧೀನ ಪಡೆದ 65ನೇ ವರ್ಷಾಚರಣೆಯನ್ನು ಚೀನಾ ಶನಿವಾರ ಭಾರತ ಮತ್ತು ಭೂತಾನ್ ಗಡಿಯ ವಿವಿಧ ಗ್ರಾಮಗಳಲ್ಲಿ ಆಚರಿಸಿತು. ಗಡಿ ರಕ್ಷಣಾ ಪಡೆಗಳ ಜೊತೆಗೆ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು ಎಂದು ಹೇಳಿಕೆ ತಿಳಿಸಿದೆ.

ಟಿಬೆಟ್ ಅನ್ನು ಚೀನಾ ‘ಕ್ಸಿಜಾಂಗ್’ ಹೆಸರಿನಿಂದ ಗುರುತಿಸಲಿದೆ. ಟಿಬೆಟ್‌ ಅನ್ನು ಚೀನಾದ ಸೇನೆಯು 1951ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದಿತ್ತು. ದಲೈಲಾಮಾ 1959ರಲ್ಲಿ ಭಾರತಕ್ಕೆ ಪಲಾಯನ ಮಾಡುವುದರೊಂದಿಗೆ ಟಿಬೆಟ್ ಆಡಳಿತ ಅಂತ್ಯಕೊಂಡಿತ್ತು. ಆ ವರ್ಷದಿಂದ ಮಾರ್ಚ್‌ 28 ಅನ್ನು ‘ಪ್ರಜಾಸತ್ತಾತ್ಮಕ ಸುಧಾರಣಾ ದಿನ’ವಾಗಿ ಚೀನಾ ಆಚರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.