ADVERTISEMENT

ನೇಪಾಳದ ‘ಪ್ರಚಂಡ’ ಸರ್ಕಾರ ಪತನ ನಿಶ್ಚಿತ: CPN–UMLನ 8 ಸಚಿವರು ಇಂದು ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2024, 5:18 IST
Last Updated 2 ಜುಲೈ 2024, 5:18 IST
ಪುಷ್ಪ ಕಮಲ್‌ ದಹಲ್ ಪ್ರಚಂಡ
ಪುಷ್ಪ ಕಮಲ್‌ ದಹಲ್ ಪ್ರಚಂಡ   

ಕಠ್ಮಂಡು(ನೇಪಾಳ): ಪ್ರಧಾನ ಮಂತ್ರಿ ಪುಷ್ಪ ಕಮಲ್ ದಹಲ್ ಪ್ರಚಂಡ ನೇತೃತ್ವದ ನೇಪಾಳದ ಮೈತ್ರಿಕೂಟದ ಸರ್ಕಾರ ಬೀಳುವುದು ಬಹುತೇಕ ಖಚಿತಗೊಂಡಿದೆ. ತಡರಾತ್ರಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಂತರ ಮಿತ್ರ ಪಕ್ಷ ಸಿಪಿಎನ್–ಯುಎಂಎಲ್ ಪಕ್ಷದ 8 ಸಚಿವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸಿಪಿಎನ್-ಯುಎಂಎಲ್ (ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- ಯುನಿಫೈಡ್ ಮಾರ್ಕ್ಸ್‌ವಾದಿ ಲೆನಿನಿಸ್ಟ್) ಮುಖ್ಯ ಸಚೇತಕ ಮಹೇಶ್ ಬರ್ತೌಲಾ ಅವರು, ದಹಲ್ ಕ್ಯಾಬಿನೆಟ್‌ನಲ್ಲಿರುವ ಎಲ್ಲ ಎಂಟು ಸಚಿವರು ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

'ನಮ್ಮ ಸಚಿವರು ಪ್ರಧಾನಮಂತ್ರಿಗಳಿಗೆ ಇಂದು ರಾಜೀನಾಮೆ ಸಲ್ಲಿಸಲಿದ್ದು, ಪರಿಸ್ಥಿತಿಯನ್ನು ಅಳೆದು ತೂಗಿ ಪ್ರಧಾನಿ ಕೂಡ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯಬಹುದು. ಸಂಜೆಯ ವೇಳೆಗೆ ಹೊಸ ಸರ್ಕಾರ ರಚೆನೆಯನ್ನು ನಿರೀಕ್ಷಿಸಲಾಗಿದೆ’ಎಂದೂ ಮಹೇಶ್ ಬರ್ತೌಲಾ ದೂರವಾಣಿ ಮೂಲಕ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ADVERTISEMENT

ಸಚಿವರ ರಾಜೀನಾಮೆ ನಿರ್ಧಾರದ ನಡುವೆಯೇ ಸಿಪಿಎನ್–ಯುಎಂಎಲ್ ಪಕ್ಷವು ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಾರ್ಯದರ್ಶಿ ಗಳ ಸಭೆ ಕರೆದಿದೆ.

ಸರ್ಕಾರದ ಪತನದ ಸೂಚನೆ ಸಿಗುತ್ತಿದ್ದಂತೆ ಸಿಪಿಎನ್-ಮಾವೋವಾದಿ ಪಕ್ಷವು ಮುಂದಿನ ಮಾರ್ಗಸೂಚಿಯ ಬಗ್ಗೆ ನಿರ್ಧರಿಸಲು ಪದಾಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದೆ. ರಾಜೀನಾಮೆ ನೀಡಬೇಕೆ ಅಥವಾ ಸಂಸತ್ತಿನಲ್ಲಿ ವಿಶ್ವಾಸಮತವನ್ನು ಎದುರಿಸಬೇಕೆ ಎಂದು ಚರ್ಚಿಸಲು ಪ್ರಧಾನಿ ದಹಲ್ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ನಾಯಕ ಗಣೇಶ್ ಶಾ ದೃಢಪಡಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ಸ್ವತಂತ್ರ ಪಕ್ಷವು ಸಹ ಮುಂಬರುವ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬೇಕೆಂಬ ಬಗ್ಗೆ ಸಭೆ ನಡೆಸುತ್ತಿದೆ. ಬಹು ದೊಡ್ಡ ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ನೇಪಾಳ ಕಾಂಗ್ರೆಸ್ ಸಹ ಪದಾಧಿಕಾರಿಗಳ ಸಭೆ ನಡೆಸುತ್ತಿದೆ.

ಮಾರ್ಚ್ 4ರಂದು ಅಧಿಕಾರಕ್ಕೆ ಬಂದ ನೇಪಾಳದ ಹೊಸ ಸರ್ಕಾರವು 100ಕ್ಕೂ ಕಡಿಮೆ ದಿನಗಳಲ್ಲಿ ಪತನದ ಹಾದಿಗೆ ಬಂದಿದೆ.

ಸಿಪಿಎನ್-ಯುಎಂಎಲ್ ಪಕ್ಷದ ಕೆ.ಪಿ. ಶರ್ಮಾ ಓಲಿ ಮತ್ತು ನೇಪಾಳ ಕಾಂಗ್ರೆಸ್ ಪಕ್ಷದ ಶೇರ್ ಬಹದ್ದೂರ್ ದೇವುಬಾ ನಡುವೆ ಮಧ್ಯರಾತ್ರಿ ಏರ್ಪಟ್ಟಿರುವ ಹೊಸ ಒಪ್ಪಂದದ ಹಿನ್ನೆಲೆಯಲ್ಲಿ ಸರ್ಕಾರ ಪತನದ ಹಾದಿ ಹಿಡಿದಿದೆ.

ಉಭಯ ಪಕ್ಷಗಳ ನಾಯಕರು ತಲಾ ಒಂದೂವರೆ ವರ್ಷ ಪ್ರಧಾನಿಯಾಗುವ ಬಗ್ಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬಂದಿದ್ದಾರೆ. ಒಪ್ಪಂದದ ಪ್ರಕಾರ, ಮೊದಲ ಒಂದೂವರೆ ವರ್ಷ ಕೆ.ಪಿ. ಶರ್ಮಾ ಓಲಿ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದು, ನಂತರದ ಅವಧಿಯಲ್ಲಿ ಶೇರ್ ಬಹದ್ದೂರ್‌ಗೆ ಅಧಿಕಾರ ಬಿಟ್ಟುಕೊಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.