ADVERTISEMENT

ನೇಪಾಳ: ಹಿಂದೂ ರಾಷ್ಟ್ರ ಘೋಷಣೆ ಬೇಡಿಕೆಗೆ ಸಚಿವರ ಬೆಂಬಲ

ಪಿಟಿಐ
Published 31 ಮಾರ್ಚ್ 2022, 14:14 IST
Last Updated 31 ಮಾರ್ಚ್ 2022, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಬೇಡಿಕೆಗೆ ಇಲ್ಲಿನ ಹಿರಿಯ ಸಚಿವರು ದನಿಗೂಡಿಸಿದ್ದು, ಬಹುಪಾಲು ಜನರು ಇದರ ಪರವಾಗಿದ್ದಾರೆ. ಜನಾಭಿಪ್ರಾಯ ಮೂಲಕ ಈ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಹೇಳಿದ್ದಾರೆ.

ಕಠ್ಮಂಡುವಿನಲ್ಲಿ ಆರಂಭಗೊಂಡಿರುವ ಎರಡು ದಿನಗಳ ವಿಶ್ವ ಹಿಂದೂ ಒಕ್ಕೂಟದ ಕಾರ್ಯಕಾರಿ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರೇಮ್‌ ಅಲೆ, ‘ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂಬುದನ್ನು ಒಪ್ಪ ಬಹುದಾಗಿದೆ. ಬೇಡಿಕೆ ಈಡೇರಿಕೆಗೆ ರಚನಾತ್ಮಕ ಪಾತ್ರ ವಹಿಸುತ್ತೇನೆ’ ಅವರು ಹೇಳಿದ್ದಾರೆ.

ನೇಪಾಳ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಅಮೆರಿಕ, ಜರ್ಮನಿ ಮತ್ತು ಇಂಗ್ಲೆಂಡ್‌ ಸೇರಿದಂತೆ 12 ದೇಶಗಳ 150 ಹಿಂದೂ ಪ್ರತಿನಿಧಿಗಳು ಭಾಗವಹಿಸಿರುವ ಈ ಎರಡು ದಿನ ಕಾರ್ಯಕ್ರಮದಲ್ಲಿ ಕೇಳಿ ಬಂದ ಬೇಡಿಕೆಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ADVERTISEMENT

ಈಗಿನ ಐದು ಪಕ್ಷಗಳ ಸಮ್ಮಿಶ್ರ ಸರ್ಕಾರವು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಹೊಂದಿರುವುದರಿಂದ ಈ ಬೇಡಿಕೆಯನ್ನು ಜನಾಭಿಪ್ರಾಯ ಸಂಗ್ರಹಕ್ಕೆ ಹಾಕಬಹುದು ಎಂದು ಸಚಿವರು ತಿಳಿಸಿದ್ದಾರೆ.

‘ನಮ್ಮ ಸಂವಿಧಾನದ ಪ್ರಕಾರ ಜಾತ್ಯತೀತ ದೇಶ ಎಂದು ಘೋಷಿಸಲಾಗಿದೆ. ಆದರೂ ಹೆಚ್ಚು ಹಿಂದೂಗಳೇ ಇರುವುದರಿಂದ ಹಾಗೂ ಈ ಬೇಡಿಕೆ ಪರವಾಗಿರುವ ಕಾರಣ ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಬಾರದು’ ಎಂದು ಪ್ರಶ್ನಿಸಿದರು.

ಜನರ ಹೋರಾಟದ ಫಲವಾಗಿ 2006ರಲ್ಲಿ ರಾಜಪ್ರಭುತ್ವ ಕೊನೆಗೊಂಡ ಬಳಿಕ 2008ರಲ್ಲಿ ಅಧಿಕಾರ ಬಂದ ಸರ್ಕಾರ ನೇಪಾಳವನ್ನು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.