ಕಠ್ಮಂಡು: ಕಳೆದ ಎರಡು ವಾರಗಳಲ್ಲಿ ನೇಪಾಳ ಸರ್ಕಾರ ವಿವಿಧ ದೇಶಗಳಲ್ಲಿದ್ದ ತನ್ನ ರಾಯಭಾರಿಗಳನ್ನು ವಾಪಾಸ್ ಕರೆಯಿಸಿಕೊಂಡಿದ್ದು, ಎಂಟು ರಾಷ್ಟ್ರಗಳಿಗೆ ಹೊಸ ರಾಯಭಾರಿಗಳನ್ನು ನೇಮಕ ಮಾಡಿ ಶುಕ್ರವಾರ ಆದೇಶಿಸಿದೆ.
ನೇಪಾಳ ಸರ್ಕಾರದ ಸಚಿವ ಸಂಪಟದ ಮೂಲಗಳ ಪ್ರಕಾರ, ಬ್ರಿಟನ್‌ನಲ್ಲಿನ ನೇಪಾಳದ ರಾಯಭಾರಿಯಾಗಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಲೋಕದರ್ಶನ್ ರೆಗ್ಮಿ ಅವರನ್ನು ಭಾರತದಲ್ಲಿನ ತನ್ನ ರಾಯಭಾರಿಯನ್ನಾಗಿ ನೇಮಿಸಿದೆ.
ಈ ಮೊದಲು ರೆಗ್ಮಿ ಅವರು ಗೃಹ ಇಲಾಖೆ, ಹಣಕಾಸು ಹಾಗೂ ಭೂಸುಧಾರಣೆ ಮತ್ತು ನಿರ್ವಹಣೆ ಇಲಾಖೆಯ ಮುಖ್ಯಸ್ಥರಾಗಿದ್ದರು.
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಾಹಲ್ (ಪ್ರಚಂಡ) ಅವರು ತಮ್ಮ ಹಿಂದಿನ ಒಕ್ಕೂಟವನ್ನು ತೊರೆದು ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರೊಂದಿಗೆ ಕೈಜೋಡಿಸಿದ ನಂತರ 11 ರಾಷ್ಟ್ರಗಳಲ್ಲಿದ್ದ ತನ್ನ ರಾಯಭಾರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರವನ್ನು ಜೂನ್ 6ರಂದು ಪ್ರಕಟಿಸಿದ್ದರು. ಇದರಲ್ಲಿ ಭಾರತ, ಅಮೆರಿಕ ಕೂಡಾ ಸೇರಿದೆ.
ಸಿಪಿಎನ್–ಯುಎಂಎಲ್ ಬೆಂಬಲಿತ ಸರ್ಕಾರ ರಚನೆಗೊಂಡ ಮೂರು ತಿಂಗಳ ನಂತರ ಇದೀಗ 8 ರಾಷ್ಟ್ರಗಳಿಗೆ ನೂತನ ರಾಯಭಾರಿಗಳ ನೇಮಕ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
ಇದರಲ್ಲಿ, ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಚಂದ್ರ ಘಿಮಿರೆ ಅವರನ್ನು ಅಮೆರಿಕದ ರಾಯಭಾರಿಯನ್ನಾಗಿ, ಬಿಜನ್ ಪಂತ್ ಅವರು ಬ್ರಿಟನ್‌ನ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.