ADVERTISEMENT

ಹೊಸ ಮೈತ್ರಿ: 3ನೇ ಬಾರಿ ವಿಶ್ವಾಸಮತ ಯಾಚಿಸಲಿರುವ ನೇಪಾಳ ಪ್ರಧಾನಿ ಪ್ರಚಂಡ

ಪಿಟಿಐ
Published 10 ಮಾರ್ಚ್ 2024, 3:12 IST
Last Updated 10 ಮಾರ್ಚ್ 2024, 3:12 IST
ಪುಷ್ಪ ಕಮಲ್‌ ದಹಾಲ್‌ ಪ್ರಚಂಡ
ಪುಷ್ಪ ಕಮಲ್‌ ದಹಾಲ್‌ ಪ್ರಚಂಡ   

ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಮಾರ್ಚ್ 13ರಂದು ತಮ್ಮ ಮೂರನೇ ವಿಶ್ವಾಸಮತ ಯಾಚನೆ ಮಾಡಲು ಉದ್ದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನೇಪಾಳ ಕಾಂಗ್ರೆಸ್ ಜೊತೆಗಿನ ಸಖ್ಯ ತೊರೆದು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಏಕೀಕೃತ ಮಾಕ್ಸ್–ಲೆನಿನ್‌ವಾದಿಗಳು) ಪಕ್ಷದ ಜೊತೆ ಹೊಸ ಮೈತ್ರಿ ಕುದುರಿಸಿದ ಬಳಿಕ ವಿಶ್ವಾಸಮತ ಯಾಚನೆಗೆ ಪ್ರಚಂಡ ಮುಂದಾಗಿದ್ದಾರೆ.

ಶನಿವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ, ಈ ವಿಷಯವನ್ನು ಕಮ್ಯುನಿಸ್ಟ್ ಮುಖಂಡರ ಜೊತೆ ಚರ್ಚಿಸಿದ್ದಾರೆ. ಮಾರ್ಚ್ 13ರಂದು ಬಹುಮತ ಸಾಬೀತುಪಡಿಸಲು ಸಿದ್ಧವಾಗುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ, ಸಿಪಿಎನ್‌ ಪಕ್ಷದ ಸಂಸದರಿಗೆ ವಿಪ್ ಸಹ ಜಾರಿಯಾಗಿದೆ.

ADVERTISEMENT

ಪ್ರಚಂಡ ಅವರ ಪಕ್ಷವೂ ಸಹ ಅಂದು ಸದನದಲ್ಲಿ ಹಾಜರಿರುವಂತೆ ತಮ್ಮ ಸಂಸದರಿಗೆ ಸೂಚಿಸಿದೆ. 275 ಸದಸ್ಯ ಬಲದ ಸಂಸತ್ತಿನಲ್ಲಿ ಆಡಳಿತಾರೂಢ ಮೈತ್ರಿಕೂಟವು ಬಹುಮತ ಹೊಂದಿದೆ ಎಂದು ವರದಿ ತಿಳಿಸಿದೆ.

ನೇಪಾಳದ ಸಂಸತ್ತಿನ ಮೇಲ್ಮನೆಯ ಅಧ್ಯಕ್ಷರ ಆಯ್ಕೆಗೆ ಮಾರ್ಚ್ 12ರಂದು ಚುನಾವಣೆ ನಿಗದಿಯಾಗಿದೆ.

2022ರ ಡಿಸೆಂಬರ್ 25ರಂದು ನೇಪಾಳ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಚಂಡ 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಇತ್ತೀಚೆಗೆ, ಪ್ರಜಾಪ್ರತಿನಿಧಿ ಸಭೆಯ ಬಹುದೊಡ್ಡ ಪಕ್ಷ ನೇಪಾಳ ಕಾಂಗ್ರೆಸ್ ಜೊತೆ ಮೈತ್ರಿ ಕಡಿದುಕೊಂಡ ಪ್ರಚಂಡ, ಒಲಿ ಜೊತೆ ಕೈಜೋಡಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ವಿಪಕ್ಷದ ಪ್ರಮುಖ ನಾಯಕನಿಗೆ ಬೆಂಬಲ ನೀಡುವ ಸಂಬಂಧ ಭಿನ್ನಮತ ಉಂಟಾಗಿದ್ದರಿಂದ ಕಳೆದ ವರ್ಷ ಕಮ್ಯುನಿಸ್ಟ್ ಪಕ್ಷವು ಪ್ರಚಂಡ ಅವರಿಗೆ ನೀಡಿದ್ದ ಬೆಂಬಲ ಹಿಂಪಡೆದಿತ್ತು. ಆಗ, ಪ್ರಧಾನಿ ಪ್ರಚಂಡ ವಿಶ್ವಾಸಮತ ಯಾಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.