ADVERTISEMENT

ವಿಶ್ವಾಸಮತ ಸಾಬೀತಿಗೆ ಪ್ರಧಾನಿ ಪ್ರಚಂಡ ವಿಫಲ; ಹೊಸ ಸರ್ಕಾರ ರಚನೆಗೆ ಸಜ್ಜಾದ ಒಲಿ

ಪಿಟಿಐ
Published 12 ಜುಲೈ 2024, 14:46 IST
Last Updated 12 ಜುಲೈ 2024, 14:46 IST
<div class="paragraphs"><p>ಪ್ರಧಾನಿ ಪುಷ್ಪ‍ ಕಮಲ್‌ ದಹಲ್ ಪ್ರಚಂಡ ಹಾಗೂ&nbsp;ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ</p></div>

ಪ್ರಧಾನಿ ಪುಷ್ಪ‍ ಕಮಲ್‌ ದಹಲ್ ಪ್ರಚಂಡ ಹಾಗೂ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ

   

ಪಿಟಿಐ ಚಿತ್ರಗಳು

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ‍ ಕಮಲ್‌ ದಹಲ್ ಪ್ರಚಂಡ ಅವರು ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದ್ದಾರೆ.

ADVERTISEMENT

ಮಿತ್ರ ಪಕ್ಷಗಳು ಬೆಂಬಲ ವಾಪಸ್‌ ಪಡೆದ ಕಾರಣ ಪ್ರಚಂಡ ಅವರು ಸಂಸತ್ತಿನಲ್ಲಿ ಇಂದು (ಜುಲೈ 12ರಂದು) ವಿಶ್ವಾಸಮತ ಯಾಚಿಸಿದರು.

275 ಸದಸ್ಯ ಬಲದ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತು ಮಾಡಲು ಕನಿಷ್ಠ 138 ಮತಗಳನ್ನು ಪಡೆಯಬೇಕಿದೆ. ಒಟ್ಟು 258 ಸದಸ್ಯರು ಸಂಸತ್ತಿನಲ್ಲಿ ಹಾಜರಿದ್ದರು. ಈ ಪೈಕಿ 63 ಮಂದಿಯಷ್ಟೇ ಪ್ರಚಂಡ ಪರ ಮತ ಹಾಕಿದರು. 194 ಮಂದಿ ವಿರುದ್ಧ ಮತ ಚಲಾಯಿಸಿದರು. ಇನ್ನೊಬ್ಬರು ಪ್ರಕ್ರಿಯೆಯಿಂದ ದೂರ ಉಳಿದರು.

ಕಮ್ಯುನಿಷ್ಟ್ ಪಾರ್ಟಿ ಆಫ್‌ ನೇಪಾಳ – ಮಾವೋವಾದಿ ಕೇಂದ್ರಿತ (ಸಿಪಿಎನ್‌–ಎಮ್‌ಸಿ) ಪಕ್ಷದ ನಾಯಕ ಪ್ರಚಂಡ 2022ರ ಡಿಸೆಂಬರ್‌ 25ರಂದು ಮೈತ್ರಿ ಸರ್ಕಾರ ರಚಿಸಿ, ಪ್ರಧಾನಿಯಾಗಿದ್ದರು. ಅಂದಿನಿಂದ ನಾಲ್ಕು ಬಾರಿ ವಿಶ್ವಾಸಮತ ಸಾಬೀತು ಮಾಡಿ ಅಧಿಕಾರ ಉಳಿಸಿಕೊಂಡಿದ್ದರು.

ಮಾಜಿ ಪ್ರಧಾನಿ ಕೆ.ಪಿ ಶರ್ಮ ಒಲಿ ಅವರು ಮೈತ್ರಿ ಸರ್ಕಾರದಿಂದ ಹೊರಬಂದು ಹೊಸ ಸರ್ಕಾರ ರಚಿಸುವ ಕಸರತ್ತು ಆರಂಭಿಸಿದ್ದರಿಂದ, ಪ್ರಚಂಡ ಅವರಿಗೆ ವಿಶ್ವಾಸಮತ ಸಾಬೀತು ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು.

ಕಮ್ಯುನಿಷ್ಟ್‌ ಪಾರ್ಟಿ ಆಫ್‌ ನೇಪಾಳ – ಯುನಿಫೈಡ್‌ ಮಾರ್ಕ್ಸಿಸ್ಟ್‌ ಲೆನಿನಿಸ್ಟ್ (ಸಿಪಿಎನ್‌–ಯುಎಮ್‌ಎಲ್) ನಾಯಕ ಒಲಿ ಅವರು ಶೇರ್ ಬಹದ್ದೂರ್‌ ದೆವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.

ಸಂಸತ್ತಿನಲ್ಲಿ 89 ಸ್ಥಾನಗಳನ್ನು ಹೊಂದಿರುವ ನೇಪಾಳಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿದೆ. ಸಿಪಿಎನ್‌–ಯುಎಮ್‌ಎಲ್‌ 78 ಸದಸ್ಯರ ಬಲ ಹೊಂದಿದೆ. ಪ್ರಚಂಡ ಅವರ ಸಿಪಿಎನ್‌–ಎಮ್‌ಸಿ ಪಕ್ಷದ ಬಳಿ 32 ಸ್ಥಾನಗಳಷ್ಟೇ ಇವೆ.

ಅಸ್ಥಿರ ರಾಜಕೀಯ ವ್ಯವಸ್ಥೆ ಹೊಂದಿರುವ ನೇಪಾಳ ಕಳೆದ 16 ವರ್ಷಗಳಲ್ಲಿ 13 ಸರ್ಕಾರಗಳನ್ನು ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.