ADVERTISEMENT

29ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದ ಕಾಮಿ ಶೆರ್ಪಾ

ಪಿಟಿಐ
Published 12 ಮೇ 2024, 13:16 IST
Last Updated 12 ಮೇ 2024, 13:16 IST
<div class="paragraphs"><p>ಕಾಮಿ ರೀಟಾ ಶೆರ್ಪಾ</p></div>

ಕಾಮಿ ರೀಟಾ ಶೆರ್ಪಾ

   

ರಾಯಿಟರ್ಸ್‌ ಚಿತ್ರ

ಕಠ್ಮಂಡು: ನೇಪಾಳದ ಹಿರಿಯ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 29ನೇ ಬಾರಿಗೆ ಏರುವ ಮೂಲಕ ಭಾನುವಾರ ತಮ್ಮ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದರು.

ADVERTISEMENT

54 ವರ್ಷ ವಯಸ್ಸಿನ ಕಾಮಿ ಅವರು ನೇಪಾಳದ ಸ್ಥಳೀಯ ಕಾಲಮಾನ ಬೆಳಿಗ್ಗೆ 7.25 ಗಂಟೆಗೆ, 8,849 ಮೀಟರ್ ಎತ್ತರದ ಶಿಖರವನ್ನು ಏರಿದರು ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಕೇಶ್ ಗುರೂಂಗ್ ತಿಳಿಸಿದರು.

ಪರ್ವತಾರೋಹಣವನ್ನು ‘ಸೆವೆನ್‌ ಸಮಿತ್ ಟ್ರೆಕ್ಸ್‌’ ಸಂಸ್ಥೆಯು ಆಯೋಜಿಸಿತ್ತು. ಕಾಮಿ ಶೆರ್ಪಾ ಸೇರಿದಂತೆ ಒಟ್ಟು 20 ಮಂದಿ ಶಿಖರಾರೋಹಿಗಳು ಭಾನುವಾರ ಶಿಖರಾರೋಹಣ ಮಾಡಿದ ತಂಡದಲ್ಲಿ ಇದ್ದರು ಎಂದು ಸಂಸ್ಥೆಯ  ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಅಮೆರಿಕ, ಕೆನಡಾ, ಕಜಕಿಸ್ತಾನದ ಪರ್ವತಾರೋಹಿಗಳ ಜೊತೆಗೆ ನೇಪಾಳದವರೇ ಆದ 13 ಮಂದಿ ತಂಡದಲ್ಲಿದ್ದರು. ಕಾಮಿ ಅವರು ಮೌಂಟ್‌ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ 1994ರಲ್ಲಿ ಏರಿದ್ದರು.

ಕಳೆದ ವರ್ಷ ಒಂದೇ ಋತುವಿನಲ್ಲಿ ಸತತವಾಗಿ ಎರಡು ಬಾರಿ ಶಿಖರವನ್ನು ಏರಿದ್ದರು. ಈಗ 29ನೇ ಬಾರಿಗೆ ಶಿಖರ ಏರುವ ಮೂಲಕ ಗರಿಷ್ಠ ಬಾರಿ ಶಿಖರವನ್ನು ಏರಿದ ದಾಖಲೆಯನ್ನು ಬರೆದರು.  

ಕಾಮಿ ಅವರು ‘ಸೆವೆನ್‌ ಸಮಿತ್ ಟ್ರೆಕ್ಸ್‌’ ಸಂಸ್ಥೆಯ ಹಿರಿಯ ಗೈಡ್‌ ಕೂಡ ಆಗಿದ್ದಾರೆ. 1970ರ ಜನವರಿ 17ರಂದು ಜನಿಸಿದ ಅವರು, ಪರ್ವತಾರೋಹಣದ ಪ್ರಯಾಣವನ್ನು 1992ರಲ್ಲಿ ಆರಂಭಿಸಿದ್ದರು.

ಅಂದಿನಿಂದಲೂ ಕಾಮಿ ಅವರ ಪರ್ವತಾರೋಹಣ ಯಾತ್ರೆಯು ನಿರ್ಭೀತಿಯಿಂದ ಸಾಗಿದೆ. ಮೌಂಟ್‌ ಎವರೆಸ್ಟ್ ಅಲ್ಲದೆ ಅವರು ಮೌಂಟ್‌ ಕೆ2, ಚೊ ಒಯು, ಲೋತ್ಸೆ ಮತ್ತು ಮನಾಸ್ಲು ಶಿಖರಗಳನ್ನೂ ಏರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.