ಜೆರುಸಲೇಂ: ಕಳೆದ ಸೆಪ್ಟೆಂಬರ್‌ನಲ್ಲಿ ಲೆಬನಾನ್, ಪ್ಯಾಲೆಸ್ಟಿನ್‌ನಲ್ಲಿ ನಡೆದಿದ್ದ ನಿಗೂಢ ಪೇಜರ್ ದಾಳಿಯನ್ನು ಇಸ್ರೇಲ್ ದೇಶವೇ ನಡೆಸಿರುವುದು ಎಂಬುದು ಇದೀಗ ಅಧಿಕೃತವಾಗಿದೆ.
ಹಿಜ್ಬುಲ್ಲಾಗೆ ಪಾಠ ಕಲಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ನಾವು ಪೇಜರ್ ದಾಳಿ ಬೇಡ ಎಂದಿದ್ದೇವು. ಆದರೆ, ಪೇಜರ್ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಒ.ಕೆ ಹೇಳಿದ್ದರು ಎಂದು ಪ್ರಧಾನಿ ಕಚೇರಿ ವಕ್ತಾರ ಒಮರ್ ದೋಸ್ತ್ರಿ ತಿಳಿಸಿದ್ದಾರೆ.
ಲೆಬನಾನ್ ಬಂಡುಕೋರ ಸಂಘಟನೆಯಾದ ಹಿಜ್ಬುಲ್ಲಾ ಕಾರ್ಯಕರ್ತರಿಗೆ ಬುದ್ದಿ ಕಲಿಸಲು ಸೆಪ್ಟೆಂಬರ್ 17 ರಂದು ಪೇಜರ್ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಜನರ ಕೈಯಲ್ಲಿದ್ದ ಸಾವಿರಾರು ಪೇಜರ್‌ಗಳು ಏಕಾಏಕಿ ಸ್ಪೋಟವಾಗಿದ್ದವು. ಪರಿಣಾಮವಾಗಿ 39 ಜನ ಮೃತಪಟ್ಟು, 3 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಇದರಲ್ಲಿ ಇನ್ನೂ ಕೆಲವರು ಕಣ್ಣು, ಕಿವಿ, ಕೈ ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೇಜರ್ ದಾಳಿಯು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಆದರೆ, ಆರೋಪಗಳನ್ನು ಅದು ಒಪ್ಪಿಕೊಂಡಿರಲಿಲ್ಲ. ಇದೀಗ ಪೇಜರ್ ದಾಳಿಯ ರೂವಾರಿಗಳು ನಾವೇ ಎಂಬುದನ್ನು ಇಸ್ರೇಲ್ ಅಧಿಕೃತವಾಗಿ ಒಪ್ಪಿಕೊಂಡಿದೆ.
ಪ್ಯಾಲೇಸ್ಟಿನ್‌ಗೆ ಬೆಂಬಲ ಸೂಚಿಸಲು ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್‌ನ ಉತ್ತರದಲ್ಲಿ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದವು. ಇದಕ್ಕಾಗಿ ಮೊಬೈಲ್‌ನಂತ ಸಣ್ಣ ಡಿವೈಸ್‌ಗಳಾದ ಪೇಜರ್‌ಗಳನ್ನು ಶಂಕಿತ ಹಿಜ್ಬುಲ್ಲಾ ಕಾರ್ಯಕರ್ತರು ಬಳಸುತ್ತಿದ್ದರು ಎನ್ನಲಾಗಿತ್ತು.
ಈ ಘಟನೆ ಜಗತ್ತಿನಾದ್ಯಂತ ವ್ಯಾಪಕ ಸಂಚಲನಕ್ಕೆ ಕಾರಣವಾಗಿತ್ತು. ಇಸ್ರೇಲ್ ಸೇನಾ ಶಕ್ತಿ, ಬೇಹುಗಾರಿಕೆ ಸಾಮರ್ಥ್ಯಕ್ಕೆ ಜಗತ್ತೇ ನಿಬ್ಬೆರಗಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.