ADVERTISEMENT

ಗಾಜಾ ನಂತರ ಲೆಬನಾನ್ ಯುದ್ಧ ಆರಂಭವಾಗಲಿದೆ: ಬೆಂಜಮಿನ್ ನೆತನ್ಯಾಹು

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 13:50 IST
Last Updated 24 ಜೂನ್ 2024, 13:50 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ನೆತನ್ಯಾಹು: ಗಾಜಾದಿಂದ ಇಸ್ರೇಲ್‌ನ ಒಂದಷ್ಟು ಸೇನಾ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳುವ ಸುಳಿವು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ದೇಶದ ಉತ್ತರದ ಗಡಿಯತ್ತ ಹೆಚ್ಚು ಸೇನೆಯನ್ನು ನಿಯೋಜಿಸುವ ಮೂಲಕ ಲೆಬನಾನ್‌ನ ಹಿಜ್ಬುಲ್ಲಾಗಳ ಜತೆ ಯುದ್ಧ ಆರಂಭಿಸುವುದಾಗಿ ಹೇಳಿದ್ದಾರೆ.

ಇಸ್ರೇಲ್‌ನ ಚಾನೆಲ್–14 ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ಅವರು, ತಮ್ಮ ಸೇನೆಯು ದಕ್ಷಿಣ ಗಾಜಾದ ರಫಾ ನಗರದಲ್ಲಿ ಕಾರ್ಯಾಚರಣೆಯನ್ನು ಬಹುತೇಕ ಪೂರ್ಣಗೊಳಿಸಿದ್ದು, ಒಂದಷ್ಟು ಪಡೆಗಳನ್ನು ಮಾತ್ರ ಅಲ್ಲಿ ಉಳಿಸಿಕೊಂಡು ಉಳಿದ ಪಡೆಗಳನ್ನು ಹಿಜ್ಬುಲ್ಲಾಗಳ ಜತೆಗೆ ಯುದ್ಧ ಮಾಡಲು ಕಳಿಸುವುದಾಗಿ ತಿಳಿಸಿದ್ದಾರೆ. ಹಾಗೆಂದು ಗಾಜಾದಲ್ಲಿ ಯುದ್ಧ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಿಲ್ಲ ಎಂದೂ ಕೂಡ ಹೇಳಿದ್ದಾರೆ.

ADVERTISEMENT

ಹಿಜ್ಬುಲ್ಲಾ ಜತೆಗಿನ ಯುದ್ಧ ಮುಖ್ಯವಾಗಿ ತಮ್ಮ ರಕ್ಷಣೆಗಾಗಿ ಎಂದಿರುವ ನೆತನ್ಯಾಹು, ಸಾವಿರಾರು ಇಸ್ರೇಲಿಗಳು ಮನೆ ತೊರೆದಿದ್ದು, ಅವರು ತಮ್ಮ ಮನೆಗಳಿಗೆ ಹಿಂತಿರುಗುವಂತೆ ಮಾಡಲು ಯುದ್ಧ ಕೂಡ ಅಗತ್ಯ ಎಂದು ತಿಳಿಸಿದ್ಧಾರೆ.

ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ಮಾಡಿದ ನಂತರ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳು ಕೂಡ ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದರು. ಅಂದಿನಿಂದ ಪ್ರತಿನಿತ್ಯ ಇಸ್ರೇಲ್ ಮತ್ತು ಹಿಬ್ಬುಲ್ಲಾ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಇದೀಗ, ಅದು ಪೂರ್ಣಪ್ರಮಾಣದ ಯುದ್ಧವಾಗಿ ಪರಿವರ್ತನೆಗೊಳ್ಳುವ ಆತಂಕ ಎದುರಾಗಿದೆ.

ಗಾಜಾದಲ್ಲಿ ಕದನ ವಿರಾಮ ಏರ್ಪಡುವವರೆಗೆ ಸಂಘರ್ಷ ಮುಂದುವರಿಸುವುದಾಗಿ ಹಿಜ್ಬುಲ್ಲಾ ಹೇಳಿದೆ. ಅದರ ನಾಯಕ ಹಸನ್ ನಸ್ರಲ್ಲಾಹ್ ಯುದ್ಧ ಆರಂಭಿಸುವ ಬಗ್ಗೆ ಇಸ್ರೇಲ್‌ಗೆ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಹಿಜ್ಬುಲ್ಲಾ ಬಳಿ ಹೊಸ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕಾ ಸಾಮರ್ಥ್ಯವಿದ್ದು, ಇಸ್ರೇಲ್‌ನ ಇತರ ಪ್ರದೇಶಗಳನ್ನು ಕೂಡ ಗುರಿ ಮಾಡಬಲ್ಲೆವು ಎಂದು ಹೇಳಿದ್ದರು.

ಅದಕ್ಕೆ ಇಸ್ರೇಲ್ ತಿರುಗೇಟು ನೀಡಿದ್ದು, ತಾವು ಇದುವರೆಗೂ ತಮ್ಮ ಸಾಮರ್ಥ್ಯದ ಅಲ್ಪಭಾಗವನ್ನು ಮಾತ್ರ ಪ್ರದರ್ಶಿಸಿದ್ದೇವೆ ಎಂದಿದೆ. ಯುದ್ಧ ನಡೆದರೆ, ಲೆಬನಾನ್ ಎರಡನೇ ಗಾಜಾ ಆಗಿ ಮಾರ್ಪಡಲಿದೆ ಎಂದು ಎಚ್ಚರಿಸಿದೆ.

ನೆತನ್ಯಾಹು ಹೇಳಿಕೆಯಿಂದ ಗಾಜಾದಲ್ಲಿ ಯುದ್ಧ ಅಂತ್ಯಗೊಳಿಸಲು ಅಮೆರಿಕ ನಡೆಸುತ್ತಿದ್ದ ಪ್ರಯತ್ನಗಳಿಗೆ ಹಿನ್ನಡೆಯಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.