ADVERTISEMENT

ಕೊರೊನಾ ಬಹುತಳಿ ವೈರಸ್‌ಗಳಿಗೆ ಒಂದೇ ಲಸಿಕೆ

ವಿಶ್ವದ ಹಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ‘ಆಲ್‌ ಇನ್ ಒನ್’ ಲಸಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:54 IST
Last Updated 6 ಮೇ 2024, 15:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಂಡನ್: ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ತಂಡವು ಕೊರೊನಾ ವೈರಸ್‌ನ–ಮುಂದೆ ಬರಲಿರುವ ತಳಿಗಳೂ ಸೇರಿದಂತೆ– ಬಹುತಳಿಗಳ ವಿರುದ್ಧ ರೋಗನಿರೋಧಕ ಶಕ್ತಿ ರೂಢಿಸಬಲ್ಲ ‘ಆಲ್‌ ಇನ್ ಒನ್’ ಲಸಿಕೆಯನ್ನು ಸಿದ್ಧಪಡಿಸಿದೆ.

‘ನೇಚರ್ ನ್ಯಾನೊಟೆಕ್ನಾಲಜಿ’ ನಿಯತಕಾಲಿಕದಲ್ಲಿ ಸೋಮವಾರ ಈ ಕುರಿತು ಸಂಶೋಧನಾ ಪ್ರಬಂಧವು ಪ್ರಕಟವಾಗಿದ್ದು, ‘ಪ್ರೊಆ್ಯಕ್ಟಿವ್ ವ್ಯಾಕ್ಸಿನಾಲಜಿ’ ಎಂಬ ಹೊಸ ಸಂಶೋಧನಾ ಕ್ರಮವೊಂದರ ಮೇಲೆ ಬೆಳಕು ಚೆಲ್ಲಿದೆ.

ಇಲಿಗಳ ಮೇಲೆ ಹೊಸ ಲಸಿಕೆಯನ್ನು ಪ್ರಯೋಗಿಸಲಾಗಿದ್ದು, ವೈರಸ್‌ನ ತಳಿಯೊಂದು ರೂಪಾಂತರಗೊಳ್ಳುವ ಮೊದಲೇ ರೋಗ ನಿರೋಧಕ ಶಕ್ತಿಯನ್ನು ಇದು ಮೂಡಿಸುತ್ತದೆ ಎಂದು ತಿಳಿದುಬಂದಿದೆ.

ADVERTISEMENT

ಯುನೈಟೆಡ್‌ ಕಿಂಗ್‌ಡಂನ ಆಕ್ಸ್‌ಫರ್ಡ್‌, ಕೇಂಬ್ರಿಜ್‌ ವಿಶ್ವವಿದ್ಯಾಲಯಗಳು ಮತ್ತು ಅಮೆರಿಕದ ಕಾಲ್‌ಟೆಕ್‌ ವಿಶ್ವವಿದ್ಯಾಲಯದ ಪ್ರಕಾರ, ಎಂಟು ವಿವಿಧ ತಳಿಗಳ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿಯನ್ನು ಹೊಸ ಲಸಿಕೆಯು ಉತ್ಪಾದನೆ ಮಾಡಬಲ್ಲದು. ಕೋವಿಡ್‌–19 ಇಡೀ ಜಗತ್ತನ್ನು ಕಾಡಲು ಕಾರಣವಾಗಿದ್ದ ಸಾರ್ಸ್‌–ಸಿಒವಿ–2 ಸೇರಿ ಈಗ ಬಾವಲಿಗಳಲ್ಲಿ ಇರುವ ಕೆಲವು ರೂಪಾಂತರ ತಳಿ ವೈರಸ್‌ಗಳು ಮಾನವನ ದೇಹವನ್ನು ಸೇರಿದರೆ, ಅವುಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೊಸ ಲಸಿಕೆ ಮೂಡಿಸಬಲ್ಲದು.

‘ಕೊರೊನಾದ ಮುಂದಿನ ಕೆಲವು ತಳಿಗಳಲ್ಲಿ ಯಾವುದಾದರೊಂದು ದೊಡ್ಡ ಮಟ್ಟದಲ್ಲಿ ಸಾಂಕ್ರಾಮಿಕವಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿ ಬಂದಾಗ ಲಸಿಕೆ ಅಭಿವೃದ್ಧಿಪಡಿಸುವ ಬದಲು ಈಗಿನಿಂದಲೇ ತಯಾರಾಗಿರುವುದು ಸರಿಯೆನ್ನಿಸಿತು. ಆ ಗುರಿಯನ್ನು ಇಟ್ಟುಕೊಂಡು ಹೊಸ ಲಸಿಕೆ ಸಿದ್ಧಪಡಿಸಲಾಗಿದೆ’ ಎಂದು ಕೇಬ್ರಿಜ್ ವಿಶ್ವವಿದ್ಯಾಲಯದ ಔಷಧ ವಿಜ್ಞಾನ ವಿಭಾಗದ ಸಂಶೋಧಕ ಹಾಗೂ ವರದಿಯನ್ನು ಸಿದ್ಧಪಡಿಸಿದ ಮುಖ್ಯ ಲೇಖಕ ರೋರಿ ಹಿಲ್ಸ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.