ಲಂಡನ್: ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಆಗಿರುವುದಕ್ಕೆ ಅಲ್ಲಿನ ಮಾಧ್ಯಮಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ರಿಷಿ ಅವರು ಪ್ರಧಾನಿ ಆಗಿರುವುದು ‘ಹೊಸ ಬೆಳಗು’ ಎಂದು ಕೆಲವು ಪತ್ರಿಕೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಕೆಲವು ಪತ್ರಿಕೆಗಳು, ‘ಪ್ರಜಾಪ್ರಭುತ್ವದ ಸಾವು’ ಎಂದು ಹೇಳಿವೆ. ಇನ್ನೂ ಕೆಲವು ಪತ್ರಿಕೆಗಳು ‘ಈ ಜಯ ಎಷ್ಟು ದಿನಗಳದ್ದು’ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿವೆ. ಒಟ್ಟಾರೆಯಾಗಿ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಿಷಿ ಅವರು ಪ್ರಧಾನಿ ಆಗಿರುವುದು ಮುಖ್ಯ ಸುದ್ದಿಯಾಗಿ ಪ್ರಕಟವಾಗಿದೆ.
‘ಗಾರ್ಡಿಯನ್’ ಪತ್ರಿಕೆಯು ಕನ್ಸರ್ವೇಟಿವ್ ಪಕ್ಷದ ಸಂಸದರನ್ನು ಉದ್ದೇಶಿಸಿ ‘ಒಗ್ಗೂಡಿ ಇಲ್ಲ ಸಾಯಿರಿ’ ಎನ್ನುವ ಬ್ಯಾನರ್ ತಲೆಬರಹವನ್ನು ಪ್ರಕಟ ಮಾಡಿದೆ. ‘ದಿ ಮೇಲ್’ ಪತ್ರಿಕೆಯುಏಷಿಯಾದವರಾದ ರಿಷಿ ಸುನಕ್ ಅವರು ನಮ್ಮ ಆಧುನಿಕ, ಕಿರಿಯ ಪ್ರಧಾನಿ ಎನ್ನುವ ಅಡಿಬರಹದೊಂದಿಗೆ ‘ಬ್ರಿಟನ್‌ನ ಹೊಸ ಬೆಳಗು’ ಎನ್ನುವ ತಲೆಬರಹ ನೀಡಿ ಸುದ್ದಿ ಪ್ರಕಟಿಸಿದೆ.
ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಹಲವು ಪತ್ರಿಕೆಗಳು ರಿಷಿ ಅವರ ಆಯ್ಕೆಯನ್ನು ವಿರೋಧಿಸಿ, ಕಟುವಾಗಿ ಟೀಕಿಸಿದ ತಲೆಬರಹದೊಂದಿಗೆ ಸುದ್ದಿಗಳನ್ನು ಪ್ರಕಟಿಸಿವೆ.
‘ಪ್ರಜಾಪ್ರಭುತ್ವದ ಸಾವು’ ಎಂದು ಬರೆದಿರುವ ‘ಸ್ಕಾಟ್‌ಲೆಂಡ್ ಡೈಲಿ ರೆಕಾರ್ಡ್’ ಪತ್ರಿಕೆಯು ರಿಷಿ ಅವರ ಆಯ್ಕೆಯನ್ನು ತೀಕ್ಷ್ಣವಾಗಿ ಟೀಕಿಸಿದೆ.
‘ದಿ ಮಿರರ್’ ಪತ್ರಿಕೆಯು ‘ನಮ್ಮ ಹೊಸ (ಆಯ್ಕೆಗೊಳ್ಳದ) ಪ್ರಧಾನಿಯೇ ನಿಮಗೆ ಮತ ನೀಡಿದವರು ಯಾರು?’ ಎಂದು ಬ್ಯಾನರ್ ತಲೆಬರಹ ನೀಡಿದೆ. ‘ಬ್ರಿಟನ್ ರಾಜನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತ’, ‘ರಿಷಿ ಅವರು ಸರ್ಕಾರದ ವೆಚ್ಚವನ್ನು ನಿರ್ದಯವಾಗಿ ತಗ್ಗಿಸಲಿದ್ದಾರೆ’ ಎಂದೂ ಪತ್ರಿಕೆ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.