ವಾಷಿಂಗ್ಟನ್ : ‘2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಪರವಾಗಿ ರಷ್ಯನ್ನರು ಹಸ್ತಕ್ಷೇಪ ಮಾಡಿರುವುದು ಹೊಸ ದಾಖಲೆಗಳಿಂದ ಸ್ಪಷ್ಟವಾಗಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ರಷ್ಯನ್ನರ ಹಸ್ತಕ್ಷೇಪ ವಿಷಯವು ಟ್ರಂಪ್ ಆಡಳಿತದ ಮೊದಲ ಮೂರು ವರ್ಷ ಪ್ರತಿಪಕ್ಷಗಳಿಗೆ ಅಸ್ತ್ರವಾಗಿತ್ತು. ಇದು ಒಮ್ಮೆ ವಾಗ್ದಂಡನೆ ನಿಲುವಳಿ ಮಂಡಿಸಲು ಕಾರಣವಾಗಿದ್ದು, ವಾಗ್ದಂಡನೆ ಯತ್ನ ವಿಫಲವಾಗಿತ್ತು.
‘ನಾಲ್ಕು ವರ್ಷಗಳ ಕಾಲ ನನ್ನನ್ನು ಗುರಿಯಾಗಿಸಿ ಈ ವಿಷಯವನ್ನು ಬಳಸಲಾಗಿತ್ತು. ಆದರೆ, ಅದನ್ನು ನಾನು ಮಾಡಿರಲಿಲ್ಲ, ಚಿಂತಿಸಿಯೂ ಇರಲಿಲ್ಲ. ನಾಲ್ಕು ವರ್ಷ ನನಗೆ ಬಾಧಿಸಿದ ರಷ್ಯನ್ನರ ತಂತ್ರ ಕುರಿತು ನಾನು ಗಮನಿಸಿರಲಿಲ್ಲ. ಗಮನಿಸಿದ್ದರೆ ತಿರುಗುಬಾಣವಾಗುತ್ತಿತ್ತು. ರಷ್ಯಾದ ಜತೆಗೆ ಅವರೇ (ವಿರೋಧ ಪಕ್ಷದವರೇ) ಕೈಜೋಡಿಸಿದ್ದರು’ ಎಂದು ಟ್ರಂಪ್ ಹೇಳಿದರು.
ಹೊಸದಾಗಿ ಲಭ್ಯವಾಗಿರುವ ದಾಖಲೆಗಳ ಪ್ರಕಾರ, 2016ರಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು. ಅದು ಹಿಲರಿ ಕ್ಲಿಂಟನ್ ಪರವಾಗಿ, ಟ್ರಂಪ್ ಪರವಾಗಿ ಅಲ್ಲ ಎಂದು ಟ್ರಂಪ್ ಅವರು ನ್ಯೂಪೋರ್ಟ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದರು.
‘ಹೊಸದಾಗಿ ಬಿಡುಗಡೆಯಾದ ಲಿಖಿತ ಸಂದೇಶಗಳು ತಮ್ಮ ಮಾತನ್ನು ಶೇ 100ರಷ್ಟು ಸ್ಪಷ್ಟಪಡಿಸುತ್ತವೆ. ಎಫ್.ಬಿ.ಐಗೆ ಕೂಡಾ ಡೆಮಾಕ್ರಾಟಿಕ್ಸ್ ನನ್ನನ್ನು ಗುರಿಯಾಗಿಸಿದ್ದು ಗೊತ್ತಿತ್ತು. ಆ ಸಂದರ್ಭದಲ್ಲಿ ನನ್ನ ಪರವಾಗಿ ಇದ್ದುದ್ದಕ್ಕಾಗಿ ಫಾಕ್ಸ್ ನ್ಯೂಸ್‌ನ ಅನೇಕ ಆ್ಯಂಕರ್‌ಗಳಿಗೂ ನಾನು ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ’ ಎಂದು ಟ್ರಂಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.