ಕಾಬೂಲ್: ಅಂಗಡಿಗಳು ಮತ್ತು ಬ್ಯಾಂಕುಗಳ ಮುಂದೆ ಉದ್ದ ಸಾಲುಗಳು, ಅಗತ್ಯ ವಸ್ತುಗಳ ಬೆಲೆಯಲ್ಲಿ ವಿಪರೀತ ಏರಿಕೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಆರಂಭಕ್ಕೆ ಸಾಕ್ಷಿಯಾಗಿವೆ. ಅಫ್ಗಾನಿಸ್ತಾನವು ತಾಲಿಬಾನ್ ವಶವಾದ ಬಳಿಕ ಅಲ್ಲಿನ ಜನರ ನಿತ್ಯದ ಸಂಕಷ್ಟ ಇನ್ನಷ್ಟು ಏರಿಕೆಯಾಗಿದೆ.
ಹೆಚ್ಚುತ್ತಲೇ ಇರುವ ಆರ್ಥಿಕ ಸಂಕಷ್ಟವು ತಾಲಿಬಾನ್ ಮುಂದೆ ಇರುವ ಅತ್ಯಂತ ದೊಡ್ಡ ಸವಾಲಾಗಿದೆ. ಅಫ್ಗಾನಿಸ್ತಾನದ ಕರೆನ್ಸಿ ಅಫ್ಗನಿಯ ಮೌಲ್ಯ ಕುಸಿಯುತ್ತಲೇ ಇದೆ. ಹಣದುಬ್ಬರ ಏರುತ್ತಿದೆ. ದೇಶದ ಜನರ ಪೈಕಿ ಮೂರನೇ ಒಂದರಷ್ಟು ಮಂದಿಯು ದಿನಕ್ಕೆ ₹150ರಷ್ಟು ವೆಚ್ಚ ಮಾಡುವ ಸ್ಥಿತಿಯನ್ನೂ ಹೊಂದಿಲ್ಲ.
ಸ್ವಲ್ಪ ಸ್ಥಿತಿವಂತರು ಎನಿಸಿಕೊಂಡವರ ಪರಿಸ್ಥಿತಿಯೂ ಈಗ ಚೆನ್ನಾಗಿಲ್ಲ. ಕಚೇರಿಗಳು ಮತ್ತು ಅಂಗಡಿಗಳಲ್ಲಿ ಹೆಚ್ಚಿನವು ಮುಚ್ಚಿವೆ. ನೌಕರರಿಗೆ ವೇತನ ಪಾವತಿ ಆಗಿಲ್ಲ. ಹಾಗಾಗಿ, ಮೂರು ಹೊತ್ತಿನ ಆಹಾರ ಹೊಂದಿಸಿಕೊಳ್ಳುವುದು ಕೂಡ ಜನರಿಗೆ ದೊಡ್ಡ ಪಡಿಪಾಟಲಾಗಿದೆ.
‘ಈಗ ಎಲ್ಲವೂ ದುಬಾರಿ. ಬೆಲೆಗಳು ದಿನಕಳೆದಂತೆ ಹೆಚ್ಚುತ್ತಲೇ ಇವೆ’ ಎಂದು ಕಾಬೂಲ್ ನಿವಾಸಿ ಝೀಲ್‌ಗಾಯ್ ಹೇಳಿದ್ದಾರೆ. ಟೊಮ್ಯಾಟೊಕ್ಕೆ ಈಗ ಕಿಲೋಗೆ 80 ಅಫ್ಗನಿ ನೀಡಬೇಕಾಗಿದೆ. ಮೊದಲು ಇದು 50 ಅಫ್ಗನಿಯ ಒಳಗೆ ಇತ್ತು ಎಂದು ಅವರು ವಿವರ ನೀಡಿದ್ಧಾರೆ.
ನಗರಗಳಲ್ಲಿ ಆಹಾರ ವಸ್ತುಗಳ ಕೊರತೆ ತೀವ್ರವಾಗಿದೆ. ಸತತ ಬರಗಾಲದಿಂದಾಗಿ ಗ್ರಾಮೀಣ ಪ್ರದೇಶದ ಜನರೂ ನಗರಗಳಿಗೆ ಬಂದು ಸೇರಿಕೊಂಡಿದ್ದಾರೆ. ಬಹುದೊಡ್ಡ ಮಾನವೀಯ ಸಂಕಷ್ಟಕ್ಕೆ ಇದು ಕಾರಣವಾಗಲಿದೆ ಎಂದು ಅಫ್ಗಾನಿಸ್ತಾನದಲ್ಲಿ ಕೆಲಸ ಮಾಡುವ ಹಲವು ಸಂಘಟನೆಗಳು ಎಚ್ಚರಿಸಿವೆ.
ಜನರು ರಸ್ತೆ ಬದಿಗಳಲ್ಲಿ ಡೇರೆಗಳನ್ನು ಹಾಕಿ ವಾಸಿಸುತ್ತಿರುವುದು ನಗರದ ಎಲ್ಲೆಡೆ ಕಂಡು ಬರುತ್ತಿದೆ ಎಂದು ನಗರ ನಿವಾಸಿಯೊಬ್ಬರು
ಹೇಳಿದ್ದಾರೆ. ಕಾಬೂಲ್ ಮಾರುಕಟ್ಟೆಯಲ್ಲಿ 50 ಕಿಲೋ ಗೋಧಿಹಿಟ್ಟಿನ ಚೀಲದ ದರವು 2,200 ಅಫ್ಗನಿಯಷ್ಟಾಗಿದೆ. ಇದು ಸಾಮಾನ್ಯ ದಿನಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚು. ತರಕಾರಿ ದರದಲ್ಲಿ ಶೇ 50ರಷ್ಟು, ಪೆಟ್ರೋಲ್ ದರಲ್ಲಿ ಶೇ 75ರಷ್ಟು ಏರಿಕೆ ಆಗಿದೆ.
ನಗದು ಸಂಕಷ್ಟ
ಕಾಬೂಲ್ ನಗರವು ತಾಲಿಬಾನ್ ವಶವಾಗುವ ಮೊದಲು 80 ಅಫ್ಗನಿಗಳಿಗೆ ಒಂದು ಡಾಲರ್ ಮೌಲ್ಯ ಇತ್ತು. ಈಗ ಅದು 93–95 ಅಫ್ಗನಿಗಳಿಗೆ ಏರಿದೆ. ಈ ದರವು ಒಂದು ಸೂಚಕ ಮಾತ್ರ. ಅಫ್ಗನಿಯು ಪೂರ್ಣವಾಗಿ ಮೌಲ್ಯವನ್ನೇ ಕಳೆದುಕೊಂಡಿದೆ.
ನಗದು ಕೇಂದ್ರಿತ ಅರ್ಥವ್ಯವಸ್ಥೆಯಲ್ಲಿ ನಗದು ಚಲಾವಣೆಯೇ ನಿಂತು ಹೋಗಿದೆ. ಗಡಿಯಲ್ಲಿರುವ ಪಾಕಿಸ್ತಾನದ ನಗರ ಪೆಶಾವರದಲ್ಲಿ ಅಫ್ಗನಿಯನ್ನು ಯಾರೂ ಸ್ವೀಕರಿಸುತ್ತಿಲ್ಲ. ಇದರ ಮೌಲ್ಯದ ಬಗ್ಗೆ ಇರುವ ಅಸ್ಥಿರತೆ ಇದಕ್ಕೆ ಕಾರಣ. ದೇಶದೊಳಗೆ ಡಾಲರ್ ಕೊರತೆ ಇರುವುದೇ ಅಘ್ಗನಿಯು ಅಲ್ಪಸ್ವಲ್ಪ ಮೌಲ್ಯ ಉಳಿಸಿಕೊಳ್ಳಲು ಕಾರಣ ಎನ್ನಲಾಗಿದೆ.
ವಿದೇಶದಿಂದ ಬರುವ ಹಣ ಸಂಪೂರ್ಣವಾಗಿ ನಿಂತು ಹೋಗಿದೆ. ವೆಸ್ಟರ್ನ್ ಯೂನಿಯನ್‌ನಂತಹ ಹಣ ವರ್ಗಾವಣೆ ಸಂಸ್ಥೆಗಳು ಮುಚ್ಚಿವೆ. ಪರಿಣಾಮವಾಗಿ ಜನರ ಬಳಿ ಹಣ ಸಂಪೂರ್ಣ ಖಾಲಿಯಾಗಿದೆ. ಜನರು ತಮ್ಮಲ್ಲಿರುವ ಆಭರಣ ಅಥವಾ ಮನೆಯ ವಸ್ತುಗಳನ್ನು ಸಿಕ್ಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಕೈಗೆಟುಕದ ಮೀಸಲು ನಿಧಿ
ಅಫ್ಗಾನಿಸ್ತಾನವು ದೇಶದ ಹೊರಗೆ ಇರಿಸಿರುವ ಸುಮಾರು 900 ಕೋಟಿ ಡಾಲರ್‌ನ (ಸುಮಾರು ₹66 ಸಾವಿರ ಕೋಟಿ) ಮೀಸಲು ನಿಧಿ ಇದೆ. ಆದರೆ, ಅಫ್ಗಾನಿಸ್ತಾನದ ಆಳ್ವಿಕೆಗೆ ತಾಲಿಬಾನ್ ಅನ್ನು ಅಧಿಕೃತವಾಗಿ ಇನ್ನೂ ನೇಮಕ ಮಾಡಲಾಗಿಲ್ಲ. ಜತೆಗೆ, ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯೂ ಸದ್ಯಕ್ಕೆ ದೊರೆಯುವ ಸಾಧ್ಯತೆ ಇಲ್ಲ. ಹಾಗಾಗಿ, ಈ ನಿಧಿಯು ಅಫ್ಗಾನಿಸ್ತಾನದ ನೆರವಿಗೆ ಬರುವ ಸಾಧ್ಯತೆ ಕ್ಷೀಣ ಎನ್ನಲಾಗಿದೆ.
ತೆರವು ಕೊನೆಯಾದ ಬಳಿಕ...
* ಅರ್ಥವ್ಯವಸ್ಥೆಗೆ ಮತ್ತೆ ಚಾಲನೆ ನೀಡುವುದಕ್ಕಾಗಿ ಬ್ಯಾಂಕು ತೆರೆಯುವಂತೆ ಆದೇಶಿಸಲಾಗಿದೆ
* ಬ್ಯಾಂಕುಗಳಿಂದ ಹಣ ವಾಪಸ್ ಪಡೆಯುವುದಕ್ಕೆ ಮಿತಿ ಹೇರಲಾಗಿದೆ
* ಅಫ್ಗಾನಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳು ಒಡ್ಡಬಹುದಾದ ಅಪಾಯದ ಅರಿವಿದೆ. ಹಾಗಾಗಿ, ಚೀನಾ ಜತೆಗಿನ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಭಯೋತ್ಪಾದನೆ ತಡೆ ಸಹಕಾರವನ್ನು ಬಲಪಡಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ
* ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಪುನರಾರಂಭಕ್ಕೆ ಕತಾರ್‌ನ ತಾಂತ್ರಿಕ ತಂಡವು ಕಾಬೂಲ್‌ಗೆ ತಲುಪಿದೆ
* ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್ ರಾಬ್ ಅವರೊಂದಿಗೆ ಅಫ್ಗನ್ ಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು ವಾರದಲ್ಲಿ ನಡೆದ ಎರಡನೇ ಸಭೆ ಇದು
*
ಪೂರ್ಣ ಮನಸ್ಸಿನಿಂದ ನಾನು ಮಾತು ಕೊಡುತ್ತೇನೆ, ಇದು (ಅಫ್ಗನ್ ಯುದ್ಧದ ಕೊನೆ) ಅಮೆರಿಕಕ್ಕೆ ಸರಿಯಾದ, ವಿವೇಕಯುತವಾದ ಅತ್ಯುತ್ತಮ ನಿರ್ಧಾರ.
–ಜೋ ಬೈಡನ್, ಅಮೆರಿಕದ ಅಧ್ಯಕ್ಷ
*
ಅಮೆರಿಕದ ಅಫ್ಗನ್ ಕಾರ್ಯಾಚರಣೆಯು ದುರಂತಗಳು, ನಷ್ಟಗಳಿಗೆ ಮಾತ್ರ ಕಾರಣವಾಗಿದೆ. ಕಾರ್ಯಾಚರಣೆಯ ಫಲಿತಾಂಶವು ಬರೇ ಸೊನ್ನೆ.
–ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.