ADVERTISEMENT

ಐಎಂಎಫ್‌ನಿಂದ ಹಣಕಾಸು ನೆರವು ಕೇಳಲು ಪಾಕ್ ಪ್ರಧಾನಿ ಶೆಹಬಾಜ್‌ ಸೂಚನೆ

ಪಿಟಿಐ
Published 5 ಮಾರ್ಚ್ 2024, 14:26 IST
Last Updated 5 ಮಾರ್ಚ್ 2024, 14:26 IST
ಶೆಹಬಾಜ್‌ ಷರೀಫ್‌
ಶೆಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌: ದೇಶದ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಂಸ್ಥೆಯವರ ಜೊತೆ ಮಾತುಕತೆ ನಡೆಸಿ, ಹಚ್ಚಿನ ಹಣಕಾಸಿನ ನೆರವು ಕೇಳುವಂತೆ ಹಣಕಾಸು ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಈಗಾಗಲೇ ಸುಸ್ತಿದಾರನಾಗಿರುವ ಪಾಕಿಸ್ತಾನಕ್ಕೆ ಕಿರು ಅವಧಿಯ ಹಣಕಾಸು ನೆರವು ಒಪ್ಪಂದದಂತೆ (ಎಸ್‌ಬಿಎ) ₹2.48 ಲಕ್ಷ ಕೋಟಿ ನೀಡುವುದಾಗಿ ಐಎಂಎಫ್‌ ಕಳೆದ ವರ್ಷ ಜೂನ್‌ನಲ್ಲಿ ಹೇಳಿತ್ತು. ಅದರಂತೆ ಜನವರಿಯಲ್ಲಿ ₹5.80 ಸಾವಿರ ಕೋಟಿಯನ್ನು ಮೊದಲ ಕಂತಿನಲ್ಲಿ ಪಾಕಿಸ್ತಾನಕ್ಕೆ ನೀಡಿತ್ತು.  

ಇದಕ್ಕೂ ಮೊದಲು, ₹5.38 ಲಕ್ಷ ಕೋಟಿ ಬೇಲ್‌ಔಟ್‌ ಸಾಲ ನೀಡುವುದಾಗಿ ಐಎಂಎಫ್‌ ಹೇಳಿತ್ತು. ಆದರೆ ಆ ಮೊತ್ತವನ್ನು ಸಂಪೂರ್ಣವಾಗಿ ನೀಡಿಲ್ಲ. ಹೀಗಾಗಿ, ₹9.94 ಸಾವಿರ ಕೋಟಿ ಮೊತ್ತದ ಬಾಕಿ ಸಾಲವನ್ನು ಐಎಂಎಫ್‌ನಿಂದ ಪಡೆಯುವುದು ಪಾಕಿಸ್ತಾನದ ಹೊಸ ಸರ್ಕಾರದ ಮುಂದಿರುವ ಸವಾಲಾಗಿದೆ. 

ADVERTISEMENT

‘ಶೆಹಬಾಜ್‌ ಷರೀಫ್‌ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವು ಗಂಟೆಗಳಲ್ಲೇ ದೇಶದ ಆರ್ಥಿಕತೆಯನ್ನು ಮರು ಸ್ಥಾಪಿಸುವ ಕುರಿತು ಸಭೆ ನಡೆಸಿದರು. ಆರ್ಥಿಕ ನೆರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಐಎಂಎಫ್‌ ಜೊತೆ ಮಾತುಕತೆ ನಡೆಸುವಂತೆ ಆದೇಶಿಸಿದರು’ ಎಂದು ಪಿಎಂಎಲ್–ಎನ್‌ ಪಕ್ಷದ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

ಇದರೊಂದಿಗೆ, ವಿದ್ಯುತ್‌ ಮತ್ತು ಅಡುಗೆ ಅನಿಲ ಪೋಲಾಗುವುದನ್ನು ತಪ್ಪಿಸಲು ಸ್ಮಾರ್ಟ್ ಮೀಟರ್‌ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದರು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದೆಮೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಕಾರ್ಯಕ್ರಮ ರೂಪಿಸಬೇಕು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.