ತೈಪೆ: ತೈವಾನ್ ಮೇಲೆ ಚೀನಾವು ತನ್ನ ಮಿಲಿಟರಿ ಮತ್ತು ರಾಜಕೀಯ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ತೈವಾನ್ ಅಧ್ಯಕ್ಷ ಲಾಯ್ ಚಿಂಗ್– ಟೆ ಹೇಳಿದರು.
ತೈಪೆಯಲ್ಲಿ ಸೋಮವಾರ ಅಧ್ಯಕ್ಷೀಯ ಕಚೇರಿ ಹೊರಗೆ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು ‘ಶಾಂತಿಯೊಂದೇ ನಮ್ಮ ಆಯ್ಕೆಯಾಗಿದೆ. ತೈವಾನ್ ಜನರ ಆಯ್ಕೆಯನ್ನು ಚೀನಾ ಗೌರವಿಸಬೇಕು’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ‘ತೈವಾನ್ ದ್ವೀಪದಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವ ಅಪಾಯಕಾರಿ ಸೂಚನೆಗಳನ್ನು ಲಾಯ್ ನೀಡುತ್ತಿದ್ದಾರೆ’ ಎಂದಿದೆ.
ಲಾಯ್ ತಮ್ಮ ಭಾಷಣದಲ್ಲಿ ‘ಮಿಲಿಟರಿ ಮತ್ತು ರಾಜಕೀಯವಾಗಿ ತೈವಾನ್ ಅನ್ನು ಚೀನಾ ಬೆದರಿಸಬಾರದು. ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಶ್ರಮಿಸುತ್ತೇನೆ. ತೈವಾನ್ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಿಕೊಳ್ಳುವುದಿಲ್ಲ. ಶಾಂತಿ ಮತ್ತು ಸ್ಥಿರತೆ ನಮ್ಮ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಚೀನಾದ ತೈವಾನ್ ವ್ಯವಹಾರಗಳ ಕಚೇರಿಯು ‘ತೈವಾನ್ ತನ್ನ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ತೈವಾನ್ ದ್ವೀಪದ ಪರಿಸ್ಥಿತಿಯು ಸಂಕೀರ್ಣ ಮತ್ತು ಕಠೋರವಾಗಿದೆ. ತೈವಾನ್‌ನ ಸ್ವಾತಂತ್ರ್ಯವು ತೈವಾನ್ ದ್ವೀಪದಲ್ಲಿನ ಶಾಂತಿಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲಿನ ಪರಿಸ್ಥಿತಿ ಹೇಗೆ ಇದ್ದರೂ, ಯಾರೇ ಅಧಿಕಾರದಲ್ಲಿದ್ದರೂ ಎರಡೂ ಕಡೆಯವರು ಚೀನಾಕ್ಕೆ ಸೇರಿದವರು ಎಂಬುದನ್ನು ಬದಲಿಸಲಾಗುವುದಿಲ್ಲ’ ಎಂದು ಕುಟುಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.