ADVERTISEMENT

ಭಾರತದ ಜತೆ ಹೊಸ ಪಾಲುದಾರಿಕೆಗೆ ಒಲವು: ಬ್ರಿಟನ್‌ ಹೊಸ ಪ್ರಧಾನಿ ಕೀರ್‌ ಸ್ಟಾರ್ಮರ್‌

ಪಿಟಿಐ
Published 5 ಜುಲೈ 2024, 15:40 IST
Last Updated 5 ಜುಲೈ 2024, 15:40 IST
ಕೀರ್‌ ಸ್ಟಾರ್ಮರ್
ಕೀರ್‌ ಸ್ಟಾರ್ಮರ್   

ಲಂಡನ್: ‘ದೇಶದಲ್ಲಿನ ಭಾರತೀಯ ಸಮುದಾಯದೊಂದಿಗೆ ಉತ್ತಮ ಸಂಬಂಧ ಹಾಗೂ ಭಾರತದೊಂದಿಗಿನ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಶ್ರಮಿಸುವೆ’ ಎಂದು ಬ್ರಿಟನ್‌ನ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್ ಶುಕ್ರವಾರ ಹೇಳಿದ್ದಾರೆ.

ಚುನಾವಣೆಯಲ್ಲಿ ವಿಜೇತರಾದ ನಂತರ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ 61 ವರ್ಷದ ಸ್ಟಾರ್ಮರ್, ‘ಬದಲಾವಣೆ ಈಗ ಶುರುವಾಗಿದೆ’ ಎಂದು ಘೋಷಿಸಿದರು.

‘ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕುವ ಜೊತೆಗೆ ಜಾಗತಿಕ ಭದ್ರತೆ, ಹವಾಮಾನ ಹಾಗೂ ಆರ್ಥಿಕ ಭದ್ರತೆಗೆ ಸಂಬಂಧಿಸಿ ಭಾರತದೊಂದಿಗೆ ಹೊಸ ಪಾಲುದಾರಿಕೆಗೆ ಲೇಬರ್‌ ಪಕ್ಷ ನೇತೃತ್ವದ ಸರ್ಕಾರ ಒತ್ತು ನೀಡಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಪಕ್ಷ ಪುನರ್‌ರಚನೆಗಾಗಿ ನಾಲ್ಕೂವರೆ ವರ್ಷಗಳ ಕಾಲ ಪಟ್ಟ ಶ್ರಮ ಈಗ ಫಲ ನೀಡಿದೆ. ಬದಲಾಗಿರುವ ಲೇಬರ್‌ ಪಕ್ಷ ದೇಶ ಸೇವೆಗೆ ಸನ್ನದ್ಧವಾಗಿದೆ. ದುಡಿಯುವ ಜನರ ಸೇವೆಗಾಗಿ ಬ್ರಿಟನ್‌ಅನ್ನು ಸಜ್ಜುಗೊಳಿಸಲು ಸಿದ್ಧವಾಗಿದೆ’ ಎಂದೂ ಹೇಳಿದ್ದಾರೆ.

ಈ ಹಿಂದೆ, ಜೆರೆಮಿ ಕಾರ್ಬಿನ್‌ ಅವರು ಲೇಬರ್‌ ಪಕ್ಷದ ಮುಖ್ಯಸ್ಥರಾಗಿದ್ದ ವೇಳೆ,  ಬ್ರಿಟಿಷ್‌ ಭಾರತೀಯರೊಂದಿಗಿನ ಪಕ್ಷದ ಸಂಬಂಧ ಉತ್ತಮವಾಗಿರಲಿಲ್ಲ. ಕಾಶ್ಮೀರ ವಿಚಾರವಾಗಿ ಅವರು ತಳೆದಿದ್ದ ನಿಲವು ಭಾರತ ವಿರೋಧಿ ಎಂದು ಗ್ರಹಿಸಲಾಗುತ್ತಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.