ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ತಿಂಗಳೇ ಕಳೆದಿದೆ. ಈ ಬೆನ್ನಲ್ಲೇ ಕದನಕ್ಕೆ ವಿರಾಮ ನೀಡಲು ಕೀವ್ ಮತ್ತು ಮಾಸ್ಕೊದ ಸಂಧಾನಕಾರರ ಮಧ್ಯೆ ಎರಡನೇ ಸುತ್ತಿನ ಮಾತುಕತೆ ಸೋಮವಾರದಿಂದ ಟರ್ಕಿಯಲ್ಲಿ ಆರಂಭವಾಗಲಿದೆ ಎಂದು ಉಕ್ರೇನ್ ತಿಳಿಸಿದೆ.
'ಇಂದು ನಡೆದ ಮೊದಲ ಸುತ್ತಿನ ವಿಡಿಯೊ ಮಾತುಕತೆಯ ಸಮಯದಲ್ಲಿ, ಮಾ. 28-30 ರಂದು ಎರಡು ನಿಯೋಗಗಳ ಮುಂದಿನ ಮಾತುಕತೆಯನ್ನು ಟರ್ಕಿಯಲ್ಲಿ ನಡೆಸಲು ನಿರ್ಧರಿಸಲಾಯಿತು' ಎಂದು ಉಕ್ರೇನ್ ಸಂಧಾನಕಾರ ಮತ್ತು ರಾಜಕಾರಣಿ ಡೇವಿಡ್ ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಉಕ್ರೇನ್ ಜನರಲ್ಲಿ ಆಳವಾದ ದ್ವೇಷವನ್ನು ರಷ್ಯಾ ಬಿತ್ತುತ್ತಿದೆ. ‘ನೀವು(ರಷ್ಯಾ) ಎಲ್ಲಾ ಕೆಡುಕುಗಳನ್ನು ಮಾಡುತ್ತಿದ್ದೀರಿ. ಆದ್ದರಿಂದ, ನಮ್ಮ ಜನರು ರಷ್ಯನ್ ಭಾಷೆಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದರು.
ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಷ್ಯಾದ ಈ ನಿಲುವನ್ನು ವಿರೋಧಿಸಿರುವ ವಿಶ್ವ ಸಮುದಾಯ ಈಗಾಗಲೇ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.