ADVERTISEMENT

ಕೋವಿಡ್‌: ಭಾರತಕ್ಕೆ ವೈದ್ಯಕೀಯ ಪರಿಕರಗಳನ್ನು ಕಳುಹಿಸಿದ ಮೌಂಟ್ ಸಿನಾಯ್ ಆಸ್ಪತ್ರೆ

ಪಿಟಿಐ
Published 4 ಜೂನ್ 2021, 5:43 IST
Last Updated 4 ಜೂನ್ 2021, 5:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನ್ಯೂಯಾರ್ಕ್: ಇಲ್ಲಿನ ಮೌಂಟ್ ಸಿನಾಯ್ ಆಸ್ಪತ್ರೆಯು ಭಾರತದಲ್ಲಿನ ಕೋವಿಡ್ ಪರಿಹಾರ ಕಾರ್ಯಗಳಿಗೆ ನೆರವಾಗುವುದಕ್ಕಾಗಿ ಅಗತ್ಯ ವೈದ್ಯಕೀಯ ಪರಿಕರಿಗಳಾದ ವೆಂಟಿಲೇಟರ್‌ಗಳು, ಪಿಪಿಇ ಕಿಟ್‌ಗಳು, ಮಾಸ್ಕ್‌ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ದೇಣಿಗೆಯಾಗಿ ಕಳುಹಿಸುತ್ತಿದೆ.

10 ವೆಂಟಿಲೇಟರ್‌ಗಳು, ಪಿಪಿಇ ಕಿಟ್‌ಗಳು, ಫೇಸ್ ಶೀಲ್ಡ್‌ಗಳು, ಡಿಜಿಟಲ್ ಥರ್ಮಾಮೀಟರ್, ಎನ್ 95 ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳು ಸೇರಿಂದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಭಾರತದಲ್ಲಿರುವ ಅಸೋಸಿಯೇಷನ್ ಆಫ್ ಇಂಡಿಯನ್ಸ್ ಇನ್ ಅಮೇರಿಕ(ಎಐಎ)ಗೆ ತಲುಪಿಸುತ್ತಿದೆ.

ಈ ಪರಿಕರಗಳನ್ನು ಭಾರತಕ್ಕೆ ತಲುಪಿಸುವ ಮತ್ತು ಆ ನಂತರ ಅಲ್ಲಿಂದ ವಿವಿಧ ರಾಜ್ಯಗಳಿಗೆ ವಿತರಿಸುವ ಜವಾಬ್ದಾರಿಯನ್ನು ಜೈಪುರ ಫೂಟ್‌ ಯುಎಸ್‌ಎ ಸಂಸ್ಥೆ ವಹಿಸಿಕೊಂಡಿದೆ.

ADVERTISEMENT

ಮೌಂಟ್‌ ಸಿನಾಯ್ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಐಎ ಅಧ್ಯಕ್ಷ ಡಾ. ಉರ್ಮಲೇಶ್ ಆರ್ಯ ಮತ್ತು ಕಾರ್ಯದರ್ಶಿ ಡಾ. ಉಷಾ ಬನ್ಸಾಲ್ ಅವರು, ಭಾರತಕ್ಕೆ ಅಗತ್ಯ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಕ್ಕೆ ಮೌಂಟ್ ಸಿನಾಯ್ ಆಸ್ಪತ್ರೆ ಅಧ್ಯಕ್ಷ ಡಾ. ಡೇವಿಡ್ ರೀಚ್ ಅವರಿಗೆ ಧನ್ಯವಾದ ಸಲ್ಲಿಸಿದರು. ಸಮಾರಂಭದಲ್ಲಿ ಮೌಂಟ್ ಸಿನಾಯ್ ಹೆಲ್ತ್ ಸಿಸ್ಟಮ್ ರಾಬಿ ಫ್ರೀಮನ್ ಕ್ಲಿನಿಕಲ್ ಇನ್ನೋವೇಶನ್ ಉಪಾಧ್ಯಕ್ಷರು ಉಪಸ್ಥಿತರಿದ್ದರು.

ಈ ಪರಿಕರಗಳ ನೆರವು ನೀಡಲು ಶ್ರಮಿಸಿದ ಇಂಟರ್ವೆನ್ಷನಲ್ ಮತ್ತು ಕ್ಲಿನಿಕಲ್ ಕಾರ್ಡಿಯಾಲಜಿ ನಿರ್ದೇಶಕ ಮತ್ತು ಮೌಂಟ್ ಸಿನಾಯ್ ಹಾರ್ಟ್ ನೆಟ್‌ವರ್ಕ್‌ನ ಖ್ಯಾತ ಹೃದಯರೋಗ ತಜ್ಞ ಡಾ.ಸಮಿನ್ ಶರ್ಮಾ ಅವರಿಗೆ ಜೈಪುರ ಫೂಟ್ ಯುಎಸ್ಎ ಅಧ್ಯಕ್ಷ ಪ್ರೇಮ್ ಭಂಡಾರಿ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.