ಕ್ರೈಸ್ಟ್‌ಚರ್ಚ್/ಸಿಡ್ನಿ/ ನವದೆಹಲಿ: ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ನಗರದ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಕನಿಷ್ಠ 49 ಮಂದಿ ಸಾವಿಗೀಡಾಗಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಮುಸ್ಲಿಮರ ಮೇಲೆ ನಡೆಸಿದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಜನಾಂಗೀಯ ದ್ವೇಷವೂ ಕಾರಣ ಎನ್ನಲಾಗಿದೆ.ಎರಡು ಪ್ರತ್ಯೇಕ ಮಸೀದಿಗಳ ಮೇಲೆದಾಳಿ ನಡೆದಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನ ವ್ಯಕ್ತಿಯೊಬ್ಬರ ಪರಿಸ್ಥಿತಿ ಗಂಭೀರವಾಗಿದೆ.
‘ದಾಳಿ ಬಳಿಕ ಭಾರತದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಆದರೆ, ಅಧಿಕೃತವಾಗಿ ದೃಢಪಟ್ಟಿಲ್ಲ. ಇದೊಂದು ಮಾನವೀಯತೆಯ ಮೇಲೆ ನಡೆದ ದಾಳಿ’ ಎಂದು ನ್ಯೂಜಿಲೆಂಡ್‌ನಲ್ಲಿರುವ ಭಾರತದ ಹೈಕಮಿಷನರ್ ಸಂಜೀವ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ವ್ಯಕ್ತಿಯಿಂದ ಕೃತ್ಯ
‘ಇದು ಪೂರ್ವನಿಯೋಜಿತ ಕೃತ್ಯ. ದಾಳಿ ಸಂಬಂಧ ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ತಿಳಿಸಿದ್ದಾರೆ.
‘ಬಂದೂಕುಧಾರಿ ಉಗ್ರ ಆಸ್ಟ್ರೇಲಿಯಾದವ ಎಂದು ಗುರುತಿಸಲಾಗಿದೆ. 28 ವರ್ಷದ ಈತನನ್ನು ಪೊಲೀಸರು
ವಶಕ್ಕೆ ಪಡೆದಿದ್ದಾರೆ‘ ಎಂದು ಅಲ್ಲಿಯ ಪ್ರಧಾನಿ ಸ್ಕಾಟ್ ಮಾರ್‍ರಿಸನ್ ತಿಳಿಸಿದ್ದಾರೆ.
ಸೇಡಿಗಾಗಿ ಹತ್ಯೆ
ಯುರೋಪ್‌ನಲ್ಲಿ ಮುಸ್ಲಿಮರು ನಡೆಸಿದ ದಾಳಿಯ ಸೇಡು ತೀರಿಸಿಕೊಳ್ಳಲು ಮತ್ತು ಭೀತಿ ಸೃಷ್ಟಿಸುವ ಉದ್ದೇಶದಿಂದ ಬಂದೂಕುಧಾರಿ ನ್ಯೂಜಿಲೆಂಡ್‌ನಲ್ಲಿ ದಾಳಿ ನಡೆಸಿದ್ದಾನೆ ಎನ್ನುವುದು ಗೊತ್ತಾಗಿದೆ.
ದಾಳಿಕೋರನ ಹೆಸರನ್ನು ಬಹಿರಂಗಪಡಿಸಿಲ್ಲ. ದಾಳಿಯ ಹೊಣೆ ಹೊತ್ತುಕೊಂಡಿರುವ ಈತ, 74 ಪುಟಗಳ ಹೊತ್ತಿಗೆಯನ್ನು ಸ್ಥಳದಲ್ಲಿ ಬಿಟ್ಟುಹೋಗಿದ್ದಾನೆ. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲೂ ಬ್ರೆಂಟಾಣ್ ಟರ‍್ರಂಟ್ ಎನ್ನುವ ಹೆಸರಿನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.