ಜಿನಿವಾ: ಮುಂದಿನ ಐದು ವರ್ಷಗಳು ಬಹುತೇಕ ಹೆಚ್ಚು ತಾಪಮಾನದಿಂದ ಕೂಡಿರಲಿವೆ ಇದೆ ಎಂದು ವಿಶ್ವ ಸಂಸ್ಥೆ ಬುಧವಾರ ಎಚ್ಚರಿಸಿದೆ.
‘ಎಲ್ ನಿನೊ’ ಹಾಗೂ ಹಸಿರುಮನೆ ಅನಿಲಗಳು ವಾತಾವರಣದ ತಾಪಮಾನ ಹೆಚ್ಚಳವಾಗಲು ಕಾರಣವಾಗಲಿವೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
2015ರಿಂದ 2022ರ ವರೆಗಿನ ಎಂಟು ವರ್ಷಗಳು ಅಧಿಕ ಉಷ್ಣಾಂಶದಿಂದ ಕೂಡಿದ್ದವು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ. ಈಗ, ಹವಾಮಾನ ಬದಲಾವಣೆಯೂ ತೀವ್ರಗೊಳ್ಳುತ್ತಿರುವ ಕಾರಣ ಬರುವ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿದೆ.
‘ಪ್ಯಾರಿಸ್ ಹವಾಮಾನ ಒಪ್ಪಂದ’ದಲ್ಲಿ ನಿಗದಿಪಡಿಸಿರುವ ಗುರಿಯನ್ನು ಮೀರಿ ಜಾಗತಿಕ ತಾಪಮಾನ ಹೆಚ್ಚಲಿದೆ. ಅಲ್ಲದೇ, ಮುಂದಿನ ಐದು ವರ್ಷಗಳ ಪೈಕಿ ಯಾವುದಾದರು ಒಂದು ವರ್ಷದಲ್ಲಿ ಉಷ್ಣಾಂಶವು ಅಧಿಕವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.
2015ರ ‘ಪ್ಯಾರಿಸ್ ಒಪ್ಪಂದ’ದಲ್ಲಿ ಹೇಳಿರುವಂತೆ ಜಾಗತಿಕ ತಾಪಮಾನವನ್ನು 1850ರಿಂದ 1900ರ ವರೆಗಿನ ಅವಧಿಯಲ್ಲಿ ದಾಖಲಾದ ತಾಪಮಾನದ ಸರಾಸರಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡುವ ಗುರಿ ನಿಗದಿಪಡಿಸಲಾಗಿದೆ. ಇಷ್ಟಾಗದಿದ್ದರೂ, ಕನಿಷ್ಠಪಕ್ಷ 1.5 ಡಿಗ್ರಿ ಸೆಲ್ಸಿಯಸ್‌ನಷ್ಟಾದರೂ ಕಡಿಮೆ ಮಾಡಬೇಕು ಎಂಬ ಆಶಯ ಹೊಂದಿದೆ.
ಆದರೆ, ದತ್ತಾಂಶಗಳ ಪ್ರಕಾರ, ಕಳೆದ ವರ್ಷ ಜಾಗತಿಕ ತಾಪಮಾನವು 1850–1900 ಅವಧಿಯ ಸರಾಸರಿಗಿಂತ 1.15 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.