ಲಾಗೋಸ್: ಕಳ್ಳಬೇಟೆಗಾರರಿಂದ ವಶಪಡಿಸಿಕೊಂಡ ₹ 93 ಕೋಟಿ ಮೌಲ್ಯದ 2.5 ಟನ್ ತೂಕದ ಆನೆ ದಂತವನ್ನು ನಾಶಪಡಿಸಿರುವ ನೈಜೀರಿಯಾ, ಕ್ಷೀಣಿಸುತ್ತಿರುವ ಆನೆ ಸಂತತಿಯ ರಕ್ಷಣೆಗೆ ಮುಂದಾಗಿದೆ.
ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಆನೆ ಸಂತತಿ ಗಣನೀಯವಾಗಿ ಕುಸಿತ ಕಂಡಿದೆ. 1500 ಇದ್ದ ಆನೆಗಳ ಸಂತತಿ ಈಗ 400ಕ್ಕೆ ಕುಸಿದಿದೆ. ಕಳ್ಳಬೇಟೆಗಾರರು ದಂತಕ್ಕಾಗಿ ಆನೆಗಳನ್ನು ಕೊಲ್ಲುತ್ತಿದ್ದಾರೆ. ಜತೆಗೆ ಮನುಷ್ಯ–ಆನೆ ಸಂಘರ್ಷವೂ ಆನೆ ಸಂತತಿ ಕ್ಷೀಣಿಸಲು ಕಾರಣ ಎಂದೆನ್ನಲಾಗಿದೆ.
‘ವಶಪಡಿಸಿಕೊಂಡ ಆನೆ ದಂತವನ್ನು ಪುಡಿ ಮಾಡಲಾಗಿದೆ. ಈ ಪುಡಿಯನ್ನೇ ಬಳಸಿ ರಾಷ್ಟ್ರೀಯ ಉದ್ಯಾನದಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಇದು ಪರಿಸರ ಸಂರಕ್ಷಣೆ ಮತ್ತು ಆನೆಗಳ ಸಂತತಿ ಉಳಿಸಲು ಪ್ರೇರಣೆಯಾಗಲಿದೆ’ ಎಂದು ಪರಿಸರ ಖಾತೆ ಸಚಿವ ಈಝಿಯಾಕ್ ಸಲಾಕೊ ತಿಳಿಸಿದ್ದಾರೆ.
ರಾಷ್ಟ್ರದ ರಾಜಧಾನಿ ಅಬುಜಾದಲ್ಲೂ ಇಂಥದ್ದೇ ಮಾದರಿಯ ದಂತ ನಾಶ ಕಾರ್ಯವನ್ನು ಕಳೆದ ಅಕ್ಟೋಬರ್‌ನಲ್ಲಿ ಅಧಿಕಾರಿಗಳು ಕೈಗೊಂಡಿದ್ದರು. ಇದರಲ್ಲಿ ಚಿಪ್ಪು ಹಂದಿಯ 4 ಟನ್ ಚಿಪ್ಪುಗಳನ್ನು ನಾಶಪಡಿಸಲಾಗಿತ್ತು.
ನೈಜೀರಿಯಾದಲ್ಲಿ ಪ್ರತಿ ವರ್ಷ ಸಾವಿರಾರು ಆನೆಗಳನ್ನು ಕೊಲ್ಲಲಾಗುತ್ತಿತ್ತು. 1989ರಿಂದ ಆನೆಯ ದಂತ ಮಾರಾಟಕ್ಕೆ ಅಲ್ಲಿ ನಿಷೇಧ ಹೇರಲಾಗಿದೆ. ಹೀಗಿದ್ದರೂ ಆಫ್ರಿಕಾದ ವನ್ಯಜೀವಿಗಳ ಉತ್ಪನ್ನಗಳಲ್ಲಿ ಪ್ರಮುಖವಾಗಿ ಆನೆ ದಂತ ಹಾಗೂ ಚಿಪ್ಪು ಹಂದಿಯ ಚಿಪ್ಪುಗಳನ್ನು ಏಷ್ಯಾಗೆ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಬ್ರಿಟನ್, ಅಮೆರಿಕ ಹಾಗೂ ಜರ್ಮನಿಯ ಅಧಿಕಾರಿಗಳ ಜತೆಗೂಡಿ ಪಶ್ಚಿಮ ಆಫ್ರಿಕಾ ರಾಷ್ಟ್ರಗಳು ಕಳ್ಳ ಸಾಗಣೆ ತಡೆಯಲು ಕ್ರಮ ಕೈಗೊಂಡಿವೆ. 2021ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಯಿಂದ ವನ್ಯಜೀವಿಗಳ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್‌ನಲ್ಲಿ ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಎರಡು ಅನೆಗಳನ್ನು ಸೈನಿಕರು ಗುಂಡಿಟ್ಟು ಹತ್ಯೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. 2022ರಲ್ಲಿ ನೈಜೀರಿಯಾ ಕಸ್ಟಮ್ಸ್ ಅಧಿಕಾರಿಗಳು ಚಿಪ್ಪು ಹಂದಿಯ 1,613 ಟನ್ ಚಿಪ್ಪುಗಳನ್ನು ವಶಪಡಿಸಿಕೊಂಡು 14 ಜನರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.