ಅಬುಜಾ (ನೈಜೀರಿಯಾ): ನೈಜೀರಿಯಾ ಸರ್ಕಾರವು 'ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಗರ್' (ಜಿಸಿಒಎನ್) ಪುರಸ್ಕಾರವನ್ನು ನೀಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲಿದೆ ಎಂದು ವರದಿಯಾಗಿದೆ.
ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.
ಇದರೊಂದಿಗೆ ಮೋದಿ ಅವರು ಈ ಗೌರವ ಸ್ವೀಕರಿಸಿದ ಎರಡನೇ ವಿದೇಶಿ ನಾಯಕ ಎನಿಸಲಿದ್ದಾರೆ. 1969ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಅವರಷ್ಟೇ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು.
ನೈಜೀರಿಯಾದ ಈ ಪುರಸ್ಕಾರವು, ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಿಂದ ದೊರೆತ 17ನೇ ಪ್ರಶಸ್ತಿಯಾಗಲಿದೆ.
ಮೂರು (ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನ) ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ, ಇಂದು ನೈಜೀರಿಯಾದ ರಾಜಧಾನಿ ಅಬುಜಾ ತಲುಪಿದ್ದಾರೆ. ಅದರೊಂದಿಗೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿಕೊಟ್ಟಂತಾಗಿದೆ.
ಮೋದಿ ಅವರನ್ನು ಸಚಿವ ನೀಸಮ್ ಎಜೆನ್ವೊ ವೈಕ್ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರೊಂದಿಗೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ನಾಳೆ ಬ್ರೆಜಿಲ್‌ಗೆ ತೆರಳಲಿದ್ದಾರೆ. ರಿಯೊ ಡಿ ಜನೈರೊದಲ್ಲಿ ನವೆಂಬರ್ 18–19ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪಾಲ್ಗೊಳ್ಳಿದ್ದಾರೆ.
ನವೆಂಬರ್ 19ರಿಂದ 21ರ ವರೆಗೆ ಗಯಾನ ಪ್ರವಾಸ ಕೈಗೊಳ್ಳಲಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಡೊಮಿನಿಕಾದಿಂದ ಗೌರವ
ಡೊಮಿನಿಕಾ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವ 'ಡಾಮಿನಿಕಾ ಅವಾರ್ಡ್ ಆಫ್ ಹಾನರ್' ಅನ್ನು ಮೂರು ದಿನಗಳ ಹಿಂದಷ್ಟೇ ಮೋದಿ ಅವರಿಗೆ ಘೋಷಿಸಿದೆ.
ಕೋವಿಡ್– 19 ಸಂದರ್ಭದಲ್ಲಿ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ತೋರಿದ ಬದ್ಧತೆಯನ್ನು ಗುರುತಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಧ್ಯಕ್ಷೆ ಸಿಲ್ವೆನಿ ಬರ್ಟನ್ ಅವರು ಮೋದಿ ಅವರಿಗೆ ಗಯಾನಾದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡಾಮಿನಿಕಾ ಪ್ರಧಾನಿ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.