ADVERTISEMENT

ಅಧಿಕಾರಕ್ಕೆ ಬಂದರೆ ಅಮೆರಿಕ ದ್ವೇಷಿ ದೇಶಗಳ ವಿದೇಶಿ ನೆರವು ಕಡಿತ: ನಿಕ್ಕಿ ಹ್ಯಾಲೆ

ಪಿಟಿಐ
Published 26 ಫೆಬ್ರುವರಿ 2023, 12:58 IST
Last Updated 26 ಫೆಬ್ರುವರಿ 2023, 12:58 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್: ‘ನಾನು ಅಧಿಕಾರಕ್ಕೆ ಬಂದರೆ ಅಮೆರಿಕವನ್ನು ದ್ವೇಷಿಸುವ ದೇಶಗಳಿಗೆ ನೀಡುವ ವಿದೇಶಿ ನೆರವನ್ನು ಕಡಿತಗೊಳಿಸುತ್ತೇನೆ’ ಎಂದು ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

‘ನಮ್ಮನ್ನು (ಅಮೆರಿಕ) ದ್ವೇಷಿಸುವ ದೇಶಗಳಿಗೆ ವಿದೇಶಿ ನೆರವನ್ನು ನಾನು ಕಡಿತಗೊಳಿಸುತ್ತೇನೆ. ಬಲಿಷ್ಠ ಅಮೆರಿಕವು ಕೆಟ್ಟ ವ್ಯಕ್ತಿಗಳಿಗೆ ನೆರವು ನೀಡುವುದಿಲ್ಲ. ಹೆಮ್ಮೆಯ ಅಮೆರಿಕವು ತನ್ನ ಜನರು ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡುವುದಿಲ್ಲ. ನಮ್ಮ ನಂಬಿಕೆಗೆ ಅರ್ಹರಾದ ನಾಯಕರು ಮಾತ್ರ ನಮ್ಮ ಶತ್ರುಗಳ ವಿರುದ್ಧ ನಿಲ್ಲುವರು ಮತ್ತು ನಮ್ಮ ಸ್ನೇಹಿತರ ಪರ ನಿಲ್ಲುವರು’ ಎಂದು ನಿಕ್ಕಿ ‘ನ್ಯೂಯಾರ್ಕ್ ಪೋಸ್ಟ್‌’ನಲ್ಲಿ ಬರೆದಿದ್ದಾರೆ.

ಪಾಕಿಸ್ತಾನ, ಚೀನಾ, ಇರಾಕ್ ಮತ್ತು ಇತರ ದೇಶಗಳ ಹೆಸರುಗಳನ್ನು ಪ್ರಸ್ತಾಪಿಸಿರುವ ನಿಕ್ಕಿ, ‘ಬಲಿಷ್ಠವಾಗಿರುವ ಅಮೆರಿಕವು ಕೆಟ್ಟ ಜನರಿಗೆ ಎಂದಿಗೂ ಹಣದ ನೆರವು ನೀಡದು’ ಎಂದಿದ್ದಾರೆ.

ADVERTISEMENT

‘ಕಳೆದ ವರ್ಷವಷ್ಟೇ ಅಮೆರಿಕವು ₹ 38 ಸಹಸ್ರ ಕೋಟಿಯನ್ನು ವಿದೇಶಿ ನೆರವಿಗಾಗಿ ನೀಡಿದೆ. ಪಾಕಿಸ್ತಾನ, ಚೀನಾ ಮತ್ತು ಇರಾಕ್‌ನಂಥ ದೇಶಗಳಿಗೆ ಧನ ಸಹಾಯ ಮಾಡಿದೆ. ಅಮೆರಿಕದ ತೆರಿಗೆದಾರರಿಗೆ ತಮ್ಮ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಅದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯುವ ಹಕ್ಕಿದೆ. ತಮ್ಮ ತೆರಿಗೆಯ ಹಣದಲ್ಲಿ ಬಹುತೇಕ ಪಾಲು ತಮ್ಮ ದೇಶದ ವಿರೋಧಿ ದೇಶಗಳಿಗೆ ಹೋಗುತ್ತಿದೆ ಎಂದು ತಿಳಿದರೆ ಅವರು ಆಘಾತಕ್ಕೊಳಗಾಗುತ್ತಾರೆ. ಚುನಾವಣೆಯಲ್ಲಿ ಗೆದ್ದು ನಾನು ಅಧ್ಯಕ್ಷೆಯಾದರೆ ಇದಕ್ಕೆ ಇತಿಶ್ರೀ ಹಾಕುತ್ತೇನೆ’ ಎಂದು ನಿಕ್ಕಿ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.