ADVERTISEMENT

ಗಾಜಾ ನಿರಾಶ್ರಿತರಿಗೆ ಪ್ರವೇಶ ನಿರ್ಬಂಧಿಸಿದ ಅರಬ್ ರಾಷ್ಟ್ರಗಳು: ನಿಕ್ಕಿ ಹ್ಯಾಲೆ

ಪಿಟಿಐ
Published 16 ಅಕ್ಟೋಬರ್ 2023, 4:57 IST
Last Updated 16 ಅಕ್ಟೋಬರ್ 2023, 4:57 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ಇಸ್ರೇಲ್‌–ಹಮಾಸ್‌ ಸಂಘರ್ಷದಿಂದಾಗಿ ಗಾಜಾದಲ್ಲಿ ನಿರಾಶ್ರಿತರಾಗಿರುವವರಿಗೆ ಪ್ರವೇಶ ನಿರ್ಬಂಧಿಸಿರುವ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲೆ ಕಿಡಿಕಾರಿದ್ದಾರೆ.

ಇರಾನ್ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್‌ ವಿರುದ್ಧವೂ ವಾಗ್ದಾಳಿ ನಡೆಸಿರುವ ಹ್ಯಾಲೆ, ಹಮಾಸ್ ಬಂಡುಕೋರರು ಮತ್ತು ಹೆಜ್ಬೊಲ್ಲಾ ಸಂಘಟನೆಗೆ ಇರಾನ್‌ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಎನ್‌ಎನ್‌ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಭಾರತ ಮೂಲದ ಹ್ಯಾಲೆ, ನಾವು ಪ್ಯಾಲೇಸ್ಟೀನ್‌ ನಾಗರಿಕರ ಕುರಿತು, ಅದರಲ್ಲೂ ಅಮಾಯಕರ ಬಗ್ಗೆ ಕಾಳಜಿ ವಹಿಸಬೇಕು. ಆದರೆ, ಅರಬ್‌ ರಾಷ್ಟ್ರಗಳು ಎಲ್ಲಿವೆ?ಕತಾರ್‌, ಲೆಬನಾನ್‌, ಜೋರ್ಡಾನ್‌, ಈಜಿಪ್ಟ್‌ ಎಲ್ಲಿ ಹೋಗಿವೆ? ನಿಮಗೆ ಗೊತ್ತಾ ನಾವು ಈಜಿಪ್ಟ್‌ಗೆ ಈ ವರ್ಷ ಒಂದು ಬಿಲಿಯನ್‌ ಡಾಲರ್‌ (ಅಂದಾಜು ₹ 8 ಸಾವಿರ ಕೋಟಿ) ನೀಡಿದ್ದೇವೆ. ಆದರೆ, ಅವರು ಗಾಜಾ ನಿರಾಶ್ರಿತರಿಗೆ ಬಾಗಿಲು ಬಂದ್ ಮಾಡಿರುವುದೇಕೆ? ಎಂದು ಕೇಳಿದ್ದಾರೆ.

ADVERTISEMENT

ಮುಂದುವರಿದು, ಹಮಾಸ್‌ ಬಂಡುಕೋರರನ್ನು ನೆರೆಯಲ್ಲಿ ಇರಿಸಿಕೊಳ್ಳುವುದನ್ನು ಅವರು ಬಯಸುವುದಿಲ್ಲ. ಹೀಗಿರುವಾಗ ಇಸ್ರೇಲ್‌ ಏಕೆ ಹಮಾಸ್‌ ಅನ್ನು ನೆರೆಯಲ್ಲಿ ಇರಿಸಿಕೊಳ್ಳುತ್ತದೆ. ಏನು ನಡೆಯುತ್ತಿದೆ ಎಂಬ ಬಗ್ಗೆ ಪ್ರಾಮಾಣಿಕವಾಗಿ ಚಿಂತನೆ ನಡೆಸಬೇಕು. ಕೂಡಲೇ ಆಕ್ರಮಣ ನಿಲ್ಲಿಸುವಂತೆ ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಹಮಾಸ್‌ಗೆ ಹೇಳುವ ಸಾಮರ್ಥ್ಯ ಅರಬ್‌ ರಾಷ್ಟ್ರಗಳಿಗೆ ಇದೆ. ಆದರೂ ಸಂಘರ್ಷದ ವಿಚಾರದಲ್ಲಿ ಭಾಗಿಯಾಗುವುದಿಲ್ಲ. ಪ್ಯಾಲೆಸ್ಟೀನ್‌ಗಾಗಿ ಏನನ್ನೂ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.

ಹಮಾಸ್‌ ಮತ್ತು ಅದರ ನಾಯಕರೊಂದಿಗೆ ಕತಾರ್‌ ಸಹಯೋಗ ಮುಂದುವರಿದಿದೆ. ಇರಾನ್‌ ಎಲ್ಲದಕ್ಕೂ ಧನ ಸಹಾಯ ಮಾಡುತ್ತಿದೆ. ಆದರೆ, ಅಮೆರಿಕ ಮತ್ತು ಇಸ್ರೇಲ್‌ನತ್ತ ಬೆರಳು ಮಾಡಲಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಒತ್ತೆಯಾಳುಗಳನ್ನು ಗುರಾಣಿಯಾಗಿ ಬಳಸುತ್ತಿರುವ ಹಮಾಸ್‌ ಬಂಡುಕೋರರು, ಎಲ್ಲರೂ ಸಾಯಲಿ ಎಂದು ಬಯಸುತ್ತಿದ್ದಾರೆ. ಆದರೆ, ಸಂಘರ್ಷದ ಸಮಯದಲ್ಲಿ ಮೃತಪಟ್ಟವರ ಚಿತ್ರಗಳನ್ನು ತೋರಿಸಿ ಇಸ್ರೇಲ್‌ ಹೀಗೆ ಮಾಡಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹ್ಯಾಲೆ ದೂರಿದ್ದಾರೆ.

ಹತ್ತು ಲಕ್ಷ ನಿರಾಶ್ರಿತರು
ಹಮಾಸ್‌ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ವಾಯುದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇಸ್ರೇಲ್‌ ಸರ್ಕಾರವು ಹಮಾಸ್ ಸಂಘಟನೆಯ ವಿರುದ್ಧ ಅಕ್ಟೋಬರ್ 8ರಂದು ಯುದ್ಧ ಘೋಷಣೆ ಮಾಡಿದೆ. ಆ ನಂತರದಲ್ಲಿ ಇಸ್ರೇಲ್ ಸೇನೆಯು ಹಮಾಸ್ ದಾಳಿಯ ರೂವಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ವೇಳೆ 2,300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹಮಾಸ್‌ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.