ಲಂಡನ್:ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿಭಾರತದ ಬ್ಯಾಂಕುಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಬಂಧನದಲ್ಲಿರುವವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಜಾಮೀನು ಅರ್ಜಿಯನ್ನು ಬ್ರಿಟನ್‌ನ ನ್ಯಾಯಾಲಯ ತಿರಸ್ಕರಿಸಿದೆ. ಇದರೊಂದಿಗೆ, ನೀರವ್ ಜಾಮೀನು ಅರ್ಜಿ ಮೂರನೇ ಬಾರಿ ತಿರಸ್ಕೃತಗೊಂಡಂತಾಗಿದೆ.
ಲಂಡನ್ ಜೈಲಿನಲ್ಲಿರುವ ನೀರವ್‌ನನ್ನು ವಿಚಾರಣೆಗಾಗಿ ಬುಧವಾರ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ, ಜಾಮೀನು ಬಾಂಡ್‌ನ ಮೊತ್ತವನ್ನು ದ್ವಿಗುಣಗೊಳಿಸಲು ಸಿದ್ಧವಿರುವುದಾಗಿ ನೀರವ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬತ್ನೋಟ್, ‘ನೀರವ್ ಬೃಹತ್ ವಂಚನೆ ಪ್ರಕರಣವನ್ನು ಎದುರಿಸುತ್ತಿದ್ದು, ಆತ ಶರಣಾಗದೆ ತಪ್ಪಿಸಿಕೊಳ್ಳಬಹುದು ಎಂಬ ನಮ್ಮ ಕಳವಳವನ್ನು 20 ಲಕ್ಷ ಪೌಂಡ್ ಬಾಂಡ್ ನಿಗದಿಪಡಿಸುವ ಮೂಲಕ ನಿವಾರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ನೀರವ್ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆ ಮೇ 30ಕ್ಕೆ ನಡೆಯಲಿದೆ.
ನೀರವ್ ಮೋದಿಯನ್ನು ಮಾರ್ಚ್ 20ರಂದು ಲಂಡನ್ ಪೊಲೀಸರು ಬಂಧಿಸಿದ್ದರು.ಭಾರತದ ಜಾರಿ ನಿರ್ದೇಶನಾಲಯ (ಇ.ಡಿ) ಮಂಡಿಸಿದ್ದ ವಾದ ಮಾನ್ಯ ಮಾಡಿದ ವೆಸ್ಟ್‌ಮಿನ್‌ಸ್ಟರ್ ಕೋರ್ಟ್, ನೀರವ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಇದರ ಆಧಾರದಲ್ಲಿ ಲಂಡನ್‌ನ ವೆಸ್ಟ್‌ಎಂಡ್‌ನಲ್ಲಿರುವ ಸೆಂಟರ್ ಪಾಯಿಂಟ್‌ನ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.