ಲಂಡನ್: ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ಭಾರತದ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಮತ್ತೆ ಹಿನ್ನಡೆಯಾಗಿದೆ.
ಗಡಿಪಾರು ಆದೇಶ ಮಾಡಿದ ಲಂಡನ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಬ್ರಿಟನ್‌ನ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿಗೆ ಅನುಮತಿ ನಿರಾಕರಿಸಲಾಗಿದೆ.
'ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರ (ನೀರವ್ ಮೋದಿ) ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ’ ಎಂದು ಲಂಡನ್ (ಹೈಕೋರ್ಟ್) ‘ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್’ನಲ್ಲಿ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ಜಸ್ಟಿಸ್ ರಾಬರ್ಟ್ ಜೇ ಅವರು ತೀರ್ಪು ಪ್ರಕಟಿಸಿದ್ದಾರೆ.
ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟು ಗಡಿಪಾರು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ನೀರವ್ ಮೋದಿ ಅವರ ಪ್ರಯತ್ನ ಈ ಹಿಂದೆ ವಿಫಲವಾಗಿತ್ತು. ಅವರ ಮಾನಸಿಕ ಆರೋಗ್ಯ ಸ್ಥಿತಿ ಕಳವಳ ಪಡುವ ಸ್ಥಿತಿಯಲ್ಲಿ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ₹16 ಸಾವಿರ ಕೋಟಿ ಸಾಲ ಹಗರಣದ ವಿಚಾರಣೆ ಎದುರಿಸಲು ಗಡೀಪಾರು ಜಾರಿಗೊಳಿಸಬಹುದು ಎಂದು ಹೈಕೋರ್ಟ್‌ನ ಇದೇ ದ್ವಿಸದಸ್ಯ ಪೀಠ ಕಳೆದ ತಿಂಗಳು ಹೇಳಿತ್ತು.
ಹಸ್ತಾಂತರ ವಾರಂಟ್ ಹಿನ್ನೆಲೆಯಲ್ಲಿ 2019ರಲ್ಲಿ ಬಂಧನಕ್ಕೊಳಗಾಗಿರುವ ನೀರವ್ ಮೋದಿ ಅವರು ವಾಂಡ್ಸ್‌ವರ್ತ್ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.