ADVERTISEMENT

ಪ್ರಾಬಲ್ಯ ಸಾಧಿಸುವ ಯತ್ನ ಬೇಡ: ಚೀನಾಗೆ ಕ್ವಾಡ್‌ ಸದಸ್ಯ ರಾಷ್ಟ್ರಗಳ ಕಟು ಸಂದೇಶ

ಪಿಟಿಐ
Published 29 ಜುಲೈ 2024, 15:30 IST
Last Updated 29 ಜುಲೈ 2024, 15:30 IST
ಟೋಕಿಯೊದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡಾ ಸ್ವಾಗತಿಸಿದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್, ಜಪಾನ್‌ನ ಯೊಕೊ ಕಮಿಕಾವಾ, ಆಸ್ಟ್ರೇಲಿಯಾದ ಪೆನ್ನಿವೊಂಗ್ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇದ್ದರು –ಎಪಿ/ಪಿಟಿಐ ಚಿತ್ರ
ಟೋಕಿಯೊದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡಾ ಸ್ವಾಗತಿಸಿದರು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್, ಜಪಾನ್‌ನ ಯೊಕೊ ಕಮಿಕಾವಾ, ಆಸ್ಟ್ರೇಲಿಯಾದ ಪೆನ್ನಿವೊಂಗ್ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇದ್ದರು –ಎಪಿ/ಪಿಟಿಐ ಚಿತ್ರ   

ಟೋಕಿಯೊ: ಇಂಡೊ–ಪೆಸಿಫಿಕ್‌ ಪ್ರದೇಶವನ್ನು ಮುಕ್ತ ವಲಯವಾಗಿಸುವ ಬದ್ಧತೆಯನ್ನು ಪುನರುಚ್ಚರಿಸಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳು, ‘ಯಾವುದೇ ದೇಶ ಮತ್ತೊಂದರ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸಬಾರದು’ ಎಂದು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿವೆ.

‘ದೇಶಗಳ ಗಡಿ, ಸಾರ್ವಭೌಮತೆ, ಪ್ರಜಾಪ್ರಭುತ್ವದ ಮೌಲ್ಯ, ಮಾನವ ಹಕ್ಕುಗಳನ್ನು ಗೌರವಿಸುತ್ತಲೇ ಮುಕ್ತ ನಿಯಮ ಆಧರಿಸಿದ ಅಂತರರಾಷ್ಟ್ರೀಯ ಮಾನದಂಡವನ್ನು ಪಾಲಿಸುವ ವಾತಾವರಣದ ನಿರ್ಮಾಣ ಅಗತ್ಯ’ ಎಂದು ಕ್ವಾಡ್‌ ರಾಷ್ಟ್ರಗಳ ವಿದೇಶಾಂಗ ಸಚಿವರು ಪ್ರತಿಪಾದಿಸಿದ್ದಾರೆ.

ಇಲ್ಲಿ ನಡೆದ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಭಾರತದ ಎಸ್‌. ಜೈಶಂಕರ್‌, ಜಪಾನ್‌ನ ಯೊಕೊ ಕಮಿಕಾವಾ, ಆಸ್ಟ್ರೇಲಿಯಾದ ಪೆನ್ನಿ ವೊಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಭಾಗವಹಿಸಿದ್ದರು.

ADVERTISEMENT

ಚೀನಾದ ಹೆಸರು ನೇರವಾಗಿ ಉಲ್ಲೇಖಿಸದೇ ನಾಲ್ಕೂ ದೇಶಗಳ ವಿದೇಶಾಂಗ ಸಚಿವರು, ಚೀನಾದ ಪೂರ್ವ ಮತ್ತು ದಕ್ಷಿಣ ಸಮುದ್ರ ವಲಯದಲ್ಲಿನ ಪರಿಸ್ಥಿತಿ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದು, ಜಂಟಿ ಹೇಳಿಕೆಯನ್ನು ನೀಡಿದ್ದಾರೆ. 

ದಕ್ಷಿಣ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಕರಾವಳಿ ಕಾವಲು ಪಡೆ, ಹಡಗುಗಳ ನಿಯೋಜನೆ ಹೆಚ್ಚಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಒತ್ತಾಯ ಅಥವಾ ದಬ್ಬಾಳಿಕೆಯಿಂದ ಈ ವಲಯದಲ್ಲಿ ಈಗಿನ ಸ್ಥಿತಿ ಬದಲಿಸುವ ಯಾವುದೇ ಕಾರ್ಯ ಸಲ್ಲದು’ ಎಂದು ಸ್ಪಷ್ಟ ವಿರೋಧವನ್ನು ದಾಖಲಿಸಿದರು. 

ಚೀನಾದ ದಕ್ಷಿಣ ಮತ್ತು ಪೂರ್ವ ಸಮುದ್ರ ವಲಯವು ಒಳಗೊಂಡಂತೆ ಹಡಗು ನಿಯೋಜನೆ ಕುರಿತ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನು ಮುಖ್ಯವಾಗಿ ಸಮುದ್ರ ನ್ಯಾಯ ಕುರಿತ ವಿಶ್ವಸಂಶ್ಥೆ ಸಮ್ಮೇಳನ ನಿರ್ಣಯದ ಪಾಲನೆ ಅಗತ್ಯ ಎಂದು ಹೇಳಿದರು.

ಮಾನವರಹಿತ ವೈಮಾನಿಕ ವಾಹಕಗಳು (ಯುಎವಿ), ಡ್ರೋಣ್‌ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಭಯೋತ್ಪಾದಕರ ಸಂಘಟನೆಗಳು ಬಳಸುವುದನ್ನು ಖಂಡಿಸುತ್ತೇವೆ ಎಂದರು.

ಉಗ್ರ ಸಂಘಟನೆಗಳು ಇಂತಹ ಪರಿಕರಗಳ ಬಳಸದಂತೆ ತಡೆಗೆ ಎಲ್ಲ ರಾಷ್ಟ್ರಗಳು ಸುಸ್ಥಿರಾಭಿವೃದ್ಧಿ ಕ್ರಮ ಕೈಗೊಳ್ಳಬೇಕು. ಐಎಸ್‌, ಲಷ್ಕರ್ ಇ ತೊಯಬಾ ಸೇರಿದಂತೆ ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕ್ವಾಡ್‌ ಸಭೆಯು ಒತ್ತಾಯಿಸಿತು.

‘ಭಾರತ–ಚೀನಾ ಗಡಿ ವಿವಾದ ಮೂರನೇ ವ್ಯಕ್ತಿ ಮಧ್ಯಪ್ರವೇಶ ಅನಗತ್ಯ’
‘ಭಾರತ– ಚೀನಾ ಗಡಿವಿವಾದದ ಸಂಬಂಧ ಮೂರನೆಯವರ ಮಧ್ಯಪ್ರವೇಶ ಅನಗತ್ಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಹೇಳಿದ್ದಾರೆ. ‘ಗಡಿ ವಿವಾದವನ್ನು ನಾವೇ ಬಗೆಹರಿಸಿಕೊಳ್ಳಬೇಕು. ನಾವು ಇತರೆ ರಾಷ್ಟ್ರಗಳ ನೆರವು ನಿರೀಕ್ಷಿಸುತ್ತಿಲ್ಲ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಸಮಸ್ಯೆ ಇದೆ ಅಥವಾ ಭಾರತ–ಚೀನಾ ನಡುವೆ ವಿವಾದವಿದೆ ಎನ್ನಬಹುದು. ನಾವೇ ಪರಿಹಾರ ಕಂಡುಕೊಳ್ಳಬೇಕು. ಈ ಎರಡೂ ಬೃಹತ್ ರಾಷ್ಟ್ರಗಳಾದ ಕಾರಣ ಸಹಜವಾಗಿ ಇತರೆ ರಾಷ್ಟ್ರಗಳಿಗೂ ಈ ಕುರಿತು ಆಸಕ್ತಿ ಇರಬಹುದು’ ಎಂದು ಹೇಳಿದರು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ಜೊತೆ ಇದೇ ತಿಂಗಳು ಎರಡು ಬಾರಿ ಭೇಟಿ ಮಾಡಿ ಚರ್ಚಿಸಲಾಗಿದೆ ಎಂದು ಅವರು ಇದೇ ವೇಳೆ ಇಲ್ಲಿ ಉಲ್ಲೇಖಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.