ನ್ಯೂಯಾರ್ಕ್: ಚೀನಾದ ವುಹಾನ್ ವೈರಾಲಜಿ ಸಂಸ್ಥೆಯಲ್ಲಿಯೇ (ಡಬ್ಲ್ಯುಐವಿ) ಕೊರೊನಾ ವೈರಸ್ ಸೋರಿಕೆಯಾಗಿದೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ಅಮೆರಿಕದ ಗುಪ್ತಚರ ಏಜೆನ್ಸಿಗಳು ಹೇಳಿವೆ.
ಆದರೆ, ಈ ಕುರಿತು ಶುಕ್ರವಾರ ಹೊರಬಿದ್ದಿರುವ ಏಜೆನ್ಸಿಗಳ ನಾಲ್ಕು ಪುಟದ ಅಧಿಕೃತ ವರದಿಯು, ವುಹಾನ್‌ನ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಸೋರಿಕೆಯ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಹೇಳಿದೆ.
ಕೊರೊನಾ ಸಾಂಕ್ರಾಮಿಕ ಸೃಷ್ಟಿಯಾದ ಬಳಿಕ ವುಹಾನ್ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ವೈರಸ್‌ನ ನೈಜ ಮೂಲ ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬುದನ್ನು ಸೆಂಟ್ರಲ್ ಇಂಟಲಿಜೆನ್ಸಿ ಸೇರಿದಂತೆ ಇತರ ಏಜೆನ್ಸಿಗಳು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಊಹೆಗಳ ಮೂಲ ಕೊನೆಗೂ ಪತ್ತೆಯಾಗಿಲ್ಲ ಎಂದು ವಿವರಿಸಲಾಗಿದೆ.
ವುಹಾನ್‌ನಲ್ಲಿ ಮೊದಲು ವೈರಸ್ ಸೋರಿಕೆಯಾಯಿತು. ಬಳಿಕ ಅದು ವಿಶ್ವದಾದ್ಯಂತ ವ್ಯಾಪಿಸಿತು ಎಂಬುದಕ್ಕೆ ಸಂಬಂಧಿಸಿದಂತೆ ವ್ಯಾಪಕ ತನಿಖೆ ನಡೆಸಲಾಗಿದೆ. ಆದರೆ, ಇದನ್ನು ಪುಷ್ಟಿಕರಿಸುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕೊರೊನಾ ಸಾಂಕ್ರಾಮಿಕ ಸೃಷ್ಟಿಗೂ ಮೊದಲು ಡಬ್ಲ್ಯುಐವಿ ಸಂಸ್ಥೆಯ ಸಿಬ್ಬಂದಿಯು ಸಾರ್ಸ್–ಕೋವ್2 ವೈರಸ್‌ನ ಸಂಶೋಧನೆಯಲ್ಲಿ ತೊಡಗಿದ್ದರೆ ಅಥವಾ ಇವರೇ ವೈರಸ್‌ನ ಸೃಷ್ಟಿಕರ್ತರು ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.