ಕರುಯಿಜಾವಾ: ಉಕ್ರೇನ್ ಮೇಲಿನ ಅತಿಕ್ರಮಣ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾದ ವಿರುದ್ಧ ಏಳು ಶ್ರೀಮಂತ ರಾಷ್ಟ್ರಗಳ ಜಿ7 ಶೃಂಗವು ಇನ್ನಷ್ಟು ಬಿಗಿ ನಿಲುವು ತಳೆದಿವೆ. ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ಹೇರಲು ಬದ್ಧರಾಗಿರುವುದಾಗಿಯೂ ಸ್ಪಷ್ಟಪಡಿಸಿವೆ.
ಜಪಾನ್‌ನ ಕರುಯಿಜಾವಾ ನಗರದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಏಳು ರಾಷ್ಟ್ರಗಳ ವಿದೇಶಾಂಗ ಸಚಿವರು ಈ ಕುರಿತು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಸಭೆಯಲ್ಲಿ ಉಕ್ರೇನ್ ಮೇಲಿನ ರಷ್ಯಾ ಅತಿಕ್ರಮಣ ಪ್ರಮುಖವಾಗಿ ಚರ್ಚೆಯಾಯಿತು.
ಈಶಾನ್ಯ ಏಷ್ಯಾದಲ್ಲಿ ಚೀನಾ ಮತ್ತು ಉತ್ತರ ಕೊರಿಯಾದ ಅತಿಕ್ರಮಣಕ್ಕೆ ಸರಿಸಮನಾಗಿ ಉಕ್ರೇನ್ ಮೇಲೆ ಅತಿಕ್ರಮಣ ನಡೆಯುತ್ತಿದೆ ಸಚಿವರು ಅಭಿಪ್ರಾಯಪಟ್ಟರು.
ಯುದ್ಧಾಪರಾಧ ಹಾಗೂ ಇತರೆ ದೌರ್ಜನ್ಯ ಕೃತ್ಯಗಳಲ್ಲಿ ರಷ್ಯಾಗೆ ಶಿಕ್ಷೆಯ ಭೀತಿಯೇ ಇಲ್ಲವಾಗಿದೆ. ರಷ್ಯಾದಿಂದ ನಾಗರಿಕ ಸಮೂಹ ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ರಷ್ಯಾದ ಮೇಲೆ ಕಠಿಣ ನಿರ್ಬಂಧ ಹೇರಲು ನಾವು ಬದ್ಧರಾಗಿದ್ದೇವೆ. ಪರಸ್ಪರ ಹೊಂದಾಣಿಕೆಯಿಂದ ಇದನ್ನು ಜಾರಿಗೊಳಿಸುತ್ತೇವೆ. ಉಕ್ರೇನ್ ಎಷ್ಟುದಿನ ತನ್ನನ್ನು ತಾನು ರಕ್ಷಿಸಿಕೊಳ್ಳುವುದೋ ಅಲ್ಲಿಯವರೆಗೂ ಅದನ್ನು ಬೆಂಬಲಿಸುತ್ತೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಕೆನಡಾ, ಇಟಲಿ ಮತ್ತು ಐರೋಪ್ಯ ಒಕ್ಕೂಟ ಈ ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ. ಅಣ್ವಸ್ತ್ರ ಬಳಕೆ ಕುರಿತಂತೆ ರಷ್ಯಾದ ಬೆದರಿಕೆ ತಂತ್ರ ಬೇಜವಾಬ್ದಾರಿತನದ್ದಾಗಿದೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.