ತೈಪೆ: ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ಭಾರತಕ್ಕೆ ಭೇಟಿ ನೀಡಿರುವುದು ನಿಜ. ಆದರೆ, ಭಾರತದಲ್ಲಿ ಹೊಸದಾಗಿ ಹೂಡಿಕೆ ಮಾಡುವ ಸಂಬಂಧ ಯಾವುದೇ ಅಂತಿಮ ಒಪ್ಪಂದವನ್ನು ಮಾಡಿಕೊಳ್ಳಲಾಗಿಲ್ಲ ಎಂದು ಫಾಕ್ಸ್‌ಕಾನ್ ಕಂಪನಿ ಸ್ಪಷ್ಟಪಡಿಸಿದೆ.
ಫಾಕ್ಸ್‌ಕಾನ್ ಕಂಪನಿಯು ಆ್ಯಪಲ್‌ನಐಫೋನ್ ಸೇರಿದಂತೆ ಹಲವು ಎಲೆಕ್ರ್ಟಾನಿಕ್ ಸಾಧನಗಳನ್ನು ತಯಾರಿಸುತ್ತಿದೆ. ಆ್ಯಪಲ್ ಕಂಪನಿಯು ರಾಜ್ಯದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದಾಗಿ 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ
ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಟ್ವೀಟ್ ಮಾಡಿದ್ದರು. ಈ ಕುರಿತು ಫಾಕ್ಸ್‌ಕಾನ್ ಶನಿವಾರ ಸ್ಪಷ್ಟನೆ ನೀಡಿದೆ.
ಫಾಕ್ಸ್‌ಕಾನ್ ಕಂಪನಿಯು ಕರ್ನಾಟಕದಲ್ಲಿ ತನ್ನ ಹೊಸ ಘಟಕ ಸ್ಥಾಪಿಸಲು ₹5,740 ಕೋಟಿ ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದೂ ವರದಿಯಾಗಿತ್ತು.
ತೆಲಂಗಾಣದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ಫಾಕ್ಸ್‌ಕಾನ್ ಅಧ್ಯಕ್ಷ ಲಿಯು ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ಸಹ ಶುಕ್ರವಾರ ಟ್ವೀಟ್ ಮಾಡಿತ್ತು.
ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ಫೆಬ್ರುವರಿ 27ರಿಂದ ಮಾರ್ಚ್ 4ರವರೆಗೆಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ, ಈ ವೇಳೆ ಯಾವುದೇ ತರಹದ ಹೂಡಿಕೆ ಒಪ್ಪಂದಗಳು ಅಂತಿಮಗೊಂಡಿಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
‘ಭಾರತದೊಂದಿಗೆ ಫಾಕ್ಸ್‌ಕಾನ್‌ನ ಪಾಲುದಾರಿಕೆಯನ್ನು ಬಲಪಡಿಸುವ ಪ್ರಯತ್ನಕ್ಕೆ ಈ ವಾರದ ನನ್ನ ಭಾರತ ಭೇಟಿಯು ಬೆಂಬಲ ನೀಡಿದೆ. ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕೆ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಭಾರತದ ಸಹಕಾರ ಕೋರಲಾಯಿತು’ ಎಂದು ಲಿಯು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಲೋಚನೆ ಮತ್ತು ಆಂತರಿಕ ಪರಿಶೀಲನೆನಡೆಯುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿಯನ್ನು ಫಾಕ್ಸ್‌ಕಾನ್ ಬಿಡುಗಡೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಇರುವ ಘಟಕದಲ್ಲಿ ಫಾಕ್ಸ್‌ಕಾನ್ ಕಂಪನಿಯು 2019ರಿಂದ ಐಫೋನ್‌ಗಳನ್ನು ತಯಾರಿಸುತ್ತಿದೆ. ವಿಸ್ಟ್ರಾನ್ ಮತ್ತು ಪೆಗಟ್ರಾನ್ ಕಂಪನಿಗಳು ಭಾರತದಲ್ಲಿ ಆ್ಯಪಲ್ ಕಂಪನಿಯ ಸ್ಮಾರ್ಟ್ ಸಾಧನಗಳ ತಯಾರಿಕೆ ಮತ್ತು ಜೋಡಣೆ ಮಾಡುತ್ತಿವೆ.
ಆ್ಯಪಲ್ ಕಂಪನಿಯು ಭಾರತದಲ್ಲಿ ತನ್ನ ಐಫೋನ್ 14 ತಯಾರಿಕೆ ಆರಂಭಿಸುವುದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು. ಬ್ಲೂಮ್‌ಬರ್ಗ್ ಪ್ರಕಾರ, ಆ್ಯಪಲ್‌ನ ಜಾಗತಿಕ ತಯಾರಿಕೆಗೆ ಹೋಲಿಸಿದರೆ ಭಾರತದ ಪಾಲು ಶೇ 5ಕ್ಕಿಂತಲೂ ಕಡಿಮೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.