ADVERTISEMENT

ಯಾವುದೇ ಸೂಪರ್ ಪವರ್ ಭಾರತವನ್ನು ಅಲುಗಾಡಿಸಲು ಸಾಧ್ಯವಿಲ್ಲ: ಇಮ್ರಾನ್ ಖಾನ್

ಪಿಟಿಐ
Published 9 ಏಪ್ರಿಲ್ 2022, 5:06 IST
Last Updated 9 ಏಪ್ರಿಲ್ 2022, 5:06 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್: ಭಾರತವನ್ನು ‘ಅತ್ಯಂತ ಗೌರವಯುತ ರಾಷ್ಟ್ರ’ಎಂದು ಕರೆದಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸರ್ಕಾರವನ್ನು ಕಿತ್ತೊಗೆಯಲು ವಿದೇಶಿ ಷಡ್ಯಂತ್ರವನ್ನು ನಡೆಸಲಾಗಿದೆ ಎಂದು ಆರೋಪಿಸಿದರು.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯಾವುದೇ ದೊಡ್ಡ ಶಕ್ತಿಯು ಭಾರತವನ್ನು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಏನನ್ನೂ ಮಾಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಅವರು (ಭಾರತ) ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದ್ದಾರೆ' ಎಂದು ಹೇಳಿದರು.

ನಾನು ಭಾರತದ ವಿರುದ್ಧವಲ್ಲ ಮತ್ತು ನೆರೆಯ ದೇಶದಲ್ಲಿಯೂ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದೇನೆ. ಆರ್‌ಎಸ್‌ಎಸ್ ಮತ್ತು ಅವರು (ಭಾರತ ಸರ್ಕಾರ) ಕಾಶ್ಮೀರದಲ್ಲಿ ಕೈಗೊಂಡ ಕ್ರಮಗಳಿಂದಾಗಿಯೇ ಭಾರತದೊಂದಿಗಿನ ಬಾಂಧವ್ಯ ಸುಧಾರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ADVERTISEMENT

'ಏನು ಮಾಡಬೇಕೆಂದು ಯಾರೊಬ್ಬರೂ ಭಾರತಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ. ಯುರೋಪಿಯನ್ ಒಕ್ಕೂಟದ ರಾಯಭಾರಿಗಳು ಇಲ್ಲಿ (ಪಾಕಿಸ್ತಾನ) ಹೇಳಿದ್ದನ್ನು ಭಾರತಕ್ಕೂ ಹೇಳಬಹುದೇ?. ಅದು ಸಾಧ್ಯವಿಲ್ಲ. ಏಕೆಂದರೆ ಭಾರತವು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ಅವರಿಗೆ (ಯುರೋಪಿಯನ್ ಒಕ್ಕೂಟದ ರಾಯಭಾರಿ) ಹೇಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

'ನಾನು ಯಾರ ವಿರುದ್ಧವೂ ಇಲ್ಲ. ಆದರೆ, ನನ್ನ ಜನರಿಗೆ ಯಾವುದು ಒಳ್ಳೆಯದು ಎಂಬುದನ್ನು ಮೊದಲು ನಾನು ನಿರ್ಧರಿಸುತ್ತೇನೆ. ಇಮ್ರಾನ್ ಖಾನ್ ಅಮೆರಿಕದ ವಿರುದ್ಧ ಅಲ್ಲ. ನಾವು ಸಮಾನ ಸಂಬಂಧಗಳನ್ನು ಬಯಸುತ್ತೇವೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.

ಶಾಸಕರು ಸರ್ಕಾರ ತೊರೆಯುವುದನ್ನು ಖಂಡಿಸುವ ಬದಲು ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಬಿಂಬಿಸಲು ಮಾಧ್ಯಮಗಳು ಹಣ ಪಡೆಯುತ್ತಿವೆ ಎಂದು ಆರೋಪಿಸಿದರು.

ಸರ್ಕಾರವನ್ನು ಕಿತ್ತೊಗೆಯುವ ವಿದೇಶಿ ಷಡ್ಯಂತ್ರವನ್ನು ತಿರಸ್ಕರಿಸಲು ಜನರು ಹೊರಗೆ ಬರುವಂತೆ ಕೇಳಿಕೊಂಡರು. 'ನೀವು ಎದ್ದು ನಿಲ್ಲದಿದ್ದರೆ, ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.