ADVERTISEMENT

ಬೆಲಾರಸ್: ನೊಬೆಲ್ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್‌ಗೆ 10 ವರ್ಷ ಜೈಲು

ಏಜೆನ್ಸೀಸ್
Published 3 ಮಾರ್ಚ್ 2023, 10:52 IST
Last Updated 3 ಮಾರ್ಚ್ 2023, 10:52 IST
ಅಲೆಸ್‌ ಬಿಯಾಲಿಯಾಟ್‌ಸ್ಕಿ (ಚಿತ್ರಕೃಪೆ: Twitter/@Tsihanouskaya)
ಅಲೆಸ್‌ ಬಿಯಾಲಿಯಾಟ್‌ಸ್ಕಿ (ಚಿತ್ರಕೃಪೆ: Twitter/@Tsihanouskaya)   

ಮಿನ್ಸ್ಕ್‌ (ಬೆಲಾರಸ್‌): 2022ರ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವಕೀಲ ಅಲೆಸ್‌ ಬಿಯಾಲಿಯಾಟ್‌ಸ್ಕಿ ಅವರಿಗೆ ಬೆಲಾರಸ್‌ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

'ವಯಸ್ನಾ ಮಾನವ ಹಕ್ಕು ಕೇಂದ್ರ'ದ ಸ್ಥಾಪಕ ಅಲೆಸ್‌ ಹಾಗೂ ಇತರ ಮೂವರು ಸಹೋದ್ಯೋಗಿಗಳು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ.

ಸರ್ವಾಧಿಕಾರಿ ಅಲೆಕ್ಸಾಂಡರ್‌ ಲುಕಶೆಂಕೊ ಅವರು 2020ರ ಚುನಾವಣೆ ಬಳಿಕ ಮತ್ತೊಂದು ಅವಧಿಗೆ ಬೆಲಾರಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದನ್ನು ವಿರೋಧಿಸಿ ಬೃಹತ್‌ ಪ್ರತಿಭಟನೆಗಳು ನಡೆದಿದ್ದವು. ದೇಶದಲ್ಲಿ ಭಾರಿ ಅಲೆ ಎಬ್ಬಿಸಿದ ಈ ಪ್ರತಿಭಟನೆಯು ಹಲವು ತಿಂಗಳವರೆಗೆ ಮುಂದುವರಿದಿತ್ತು.

ADVERTISEMENT

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಸುಮಾರು 35,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.

ಇದೇ ವೇಳೆ ಬಂಧನಕ್ಕೊಳಗಾಗಿದ್ದ ಅಲೆಸ್‌ ಹಾಗೂ ಅವರ ಸಹೋದ್ಯೋಗಿಗಳು, 'ವಯಸ್ನಾ' ಸಂಘಟನೆಯ ಹಣವನ್ನು, ರಾಜಕೀಯ ಕೈದಿಗಳಿಗೆ ಕಾನೂನು ಪ್ರಕ್ರಿಕೆಯಗಳ ಶುಲ್ಕ ಪಾವತಿ ಹಾಗೂ ಇತರ ಉದ್ದೇಶಕ್ಕೆ ನೆರವಾಗಲು ಬಳಸಿದ್ದಾರೆ ಎಂಬ ಆರೋಪದ ಮೇಲೆ ಇಲ್ಲಿನ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

1994ರಿಂದಲೂ ಅಧಿಕಾರದಲ್ಲಿರುವ ಲುಕಶೆಂಕೊ, ವಿರೋಧಿ ನಾಯಕರನ್ನು ಹಾಗೂ ಸ್ವತಂತ್ರ ಮಾಧ್ಯಮಗಳನ್ನು ನಿರಂತರವಾಗಿ ನಿಗ್ರಹಿಸುತ್ತಾ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.