ಓಸ್ಲೋ : ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ, ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಯನ್ನು ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಶುಕ್ರವಾರ ಆಯ್ಕೆ ಮಾಡಲಾಗಿದೆ.
‘ಸಾಕಷ್ಟು ಒತ್ತಡದ ನಡುವೆಯೂ ಪರಮಾಣು ಅಸ್ತ್ರಗಳ ಬಳಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗೆ ಶಾಂತಿ ಪ್ರಶಸ್ತಿ ನೀಡಲಾಗಿದೆ’ ಎಂದು ನಾರ್ವೆಯ ನೊಬೆಲ್ ಸಮಿತಿ ಅಧ್ಯಕ್ಷ ಜಾರ್ಗೆಮ್ ವಾಟ್ನೆ ಫ್ರಿಡ್‌ನೆಸ್ ತಿಳಿಸಿದರು.
‘ದುರಂತದಲ್ಲಿ ದೈಹಿಕ ಸಂಕಟದ ಜತೆಗೆ ನೋವಿನ ನೆನಪುಗಳ ಹೊರತಾಗಿಯೂ ಬದುಕುಳಿದ ಎಲ್ಲರಿಗೂ ಶುಭ ಹಾರೈಸುತ್ತೇವೆ. ತಮ್ಮ ತ್ರಾಸದಾಯಕ ಅನುಭವಗಳನ್ನು ಶಾಂತಿ ಸ್ಥಾಪನೆಗೆ ಸಂಸ್ಥೆಯು ಶ್ರಮಿಸುತ್ತಿದೆ’ ಎಂದು ಅವರು ಪ್ರಶಂಸಿಸಿದರು.
ಪ್ರಶಸ್ತಿ ಘೋಷಣೆಯಾದ ಸುದ್ದಿ ಕೇಳುತ್ತಿದ್ದಂತೆಯೇ ನಿಹಾನ್ ಹಿಡಾಂಕ್ಯೊದ ಹಿರೋಶಿಮಾ ಶಾಖೆಯ ಮುಖ್ಯಸ್ಥ ತೊಶಿಯುಕಿ ಮಿಮಾಕಿ ಸಂತಸ ವ್ಯಕ್ತಪಡಿಸಿದರು.
‘ಇದು ನಿಜವೇ.. ನಂಬಲೂ ಸಾಧ್ಯವಾಗುತ್ತಿಲ್ಲ’ ಎಂದು ಅವರು ಸಂಭ್ರಮಿಸಿದರು.
ಮಧ್ಯಪ್ರಾಚ್ಯ, ಉಕ್ರೇನ್– ರಷ್ಯಾ ಹಾಗೂ ಸುಡಾನ್‌ನಲ್ಲಿ ಯುದ್ಧ ನಡೆಯುತ್ತಿರುವ ಮಧ್ಯದಲ್ಲೇ ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗೆ ಶಾಂತಿ ಪ್ರಶಸ್ತಿ ಘೋಷಿಸಿರುವುದು ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.