ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಸಿದವರಿಗೆ ನೊಬೆಲ್‌ ಸೂಕ್ತ: ಇಮ್ರಾನ್‌

ಪಿಟಿಐ
Published 4 ಮಾರ್ಚ್ 2019, 19:14 IST
Last Updated 4 ಮಾರ್ಚ್ 2019, 19:14 IST
   

ಇಸ್ಲಾಮಾಬಾದ್ : ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ವ್ಯಕ್ತಿಯು ನೊಬೆಲ್ ಶಾಂತಿ ಪ‍್ರಶಸ್ತಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತದ ಜತೆಗಿನ ಸಮರ ಸನ್ನಿಹಿತ ಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಇಮ್ರಾನ್ ತೆಗೆದುಕೊಂಡ ದಿಟ್ಟ ನಿರ್ಧಾರದ ಕಾರಣ ಅವರನ್ನು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಪರಿಗಣಿಸುವಂತೆ ಒತ್ತಾಯಿಸಿ ಪಾಕಿಸ್ತಾನದ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಮೂಲಕ ಇಮ್ರಾನ್ ಖಾನ್ ಜವಾಬ್ದಾರಿ
ಯಿಂದ ವರ್ತಿಸಿದ್ದು, ನೊಬೆಲ್‌ಗೆ ಅರ್ಹರು ಎಂದು ನಿರ್ಣಯ ಕೈಗೊಳ್ಳಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್, ‘ಶಾಂತಿ ಪ್ರಶಸ್ತಿಗೆ ನಾನು ಅರ್ಹನಲ್ಲ. ಕಾಶ್ಮೀರರದ ಜನರ ಬಯಕೆಯಂತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಉಪಖಂಡದಲ್ಲಿ ಶಾಂತಿ ಸ್ಥಾಪನೆಗೆ ದಾರಿ ಮಾಡಿಕೊಡುವ ವ್ಯಕ್ತಿಗೇ ಈ ಪ್ರಶಸ್ತಿ ಸಲ್ಲಬೇಕು’ ಎಂದಿದ್ದಾರೆ.

ADVERTISEMENT

ಸಮಜೋತಾ ಪುನರಾರಂಭ

ಪುಲ್ವಾಮಾ ದಾಳಿಯ ಬಳಿಕ ಸ್ಥಗಿತಗೊಂಡಿದ್ದ ಸಮಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ಸೋಮವಾರ ಪುನರಾರಂಭಿಸಿದೆ. ಮತ್ತೆ ಸೇವೆ ಆರಂಭಿಸುವುದಾಗಿ ಭಾರತ ಹಾಗೂ ಪಾಕಿಸ್ತಾನ ಶನಿವಾರ ಪ್ರಕಟಿಸಿದ್ದವು.

150 ಪ್ರಯಾಣಿಕರನ್ನು ಹೊತ್ತ ರೈಲು ಸೋಮವಾರ ಲಾಹೋರ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿತು. ಪ್ರತಿ ಸೋಮವಾರ ಹಾಗೂ ಗುರುವಾರ ಸಮಜೋತಾ ರೈಲು ಹೊರಡುತ್ತದೆ. ದೆಹಲಿಯಿಂದ ಪ್ರತಿ ಬುಧವಾರ ಮತ್ತು ಭಾನುವಾರ ರೈಲು ಹೊರಡುತ್ತದೆ.

ಸಿಮ್ಲಾ ಒಪ್ಪಂದದ ಪ್ರಕಾರ ದೆಹಲಿ–ಲಾಹೋರ್ ನಡುವಿನ ರೈಲು ಸಂಚಾರವು ಜುಲೈ 22, 1976ರಲ್ಲಿ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.