ADVERTISEMENT

ರಸಾಯನ ವಿಜ್ಞಾನ ಕ್ಷೇತ್ರ: ಮೂವರಿಗೆ ನೊಬೆಲ್‌ ಪ್ರಶಸ್ತಿ

ಏಜೆನ್ಸೀಸ್
Published 10 ಅಕ್ಟೋಬರ್ 2019, 2:54 IST
Last Updated 10 ಅಕ್ಟೋಬರ್ 2019, 2:54 IST
   

ಸ್ಟಾಕ್‌ಹೋಮ್‌: ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನ ವಿಜ್ಞಾನ ಕ್ಷೇತ್ರದ ಮೂವರು ವಿಜ್ಞಾನಿಗಳಿಗೆ ಬುಧವಾರ ನೊಬೆಲ್‌ ಪ್ರಶಸ್ತಿ ಪ್ರಕಟಿಸಲಾಗಿದೆ.

ಟೆಕ್ಸಾಸ್‌ ಯೂನಿವರ್ಸಿಟಿಯ 97 ವರ್ಷದ ಹಿರಿಯ ವಿಜ್ಞಾನಿ ಜಾನ್‌ ಬಿ. ಗೂಡೆನಫ್‌, ಸ್ಟೇಟ್‌ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್‌ನ ಎಂ. ಸ್ಟಾನ್ಲಿ ವಿಟ್ಟಿಂಗ್‌ಹ್ಯಾಮ್‌ ಮತ್ತು ಜಪಾನ್‌ನ ಅಸಹಿ ಕಸೆ ಕಾರ್ಪೊರೇಷನ್‌ ಮತ್ತು ಮೇಜೊ ಯೂನಿವರ್ಸಿಟಿಯ ಅಕಿರಾ ಯೋಶಿನೊ ಅವರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಕಾರು, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ವಸ್ತುಗಳ ಇಂಧನ ಸಂಗ್ರಹ ವಿಧಾನವನ್ನು ಮರುರೂಪಿಸುವ ನಿಟ್ಟಿನಲ್ಲಿ ಈ ವಿಜ್ಞಾನಿಗಳ ಕೊಡುಗೆ ಮಹತ್ವದ್ದಾಗಿದೆ. ಹಗುರವಾದ ಬ್ಯಾಟರಿಗಳನ್ನು ನಾವು ಈಗ ಎಲ್ಲ ಕಡೆಗಳಲ್ಲಿ ಸುಲಭವಾಗಿ ಬಳಸಲು ಈ ಸಂಶೋಧನೆಗಳಿಂದಾಗಿ ಅನುಕೂಲವಾಗಿದೆ.

ADVERTISEMENT

‘ಬ್ಯಾಟರಿಗಳ ರಿಚಾರ್ಜ್‌ ಕ್ಷೇತ್ರಕ್ಕೆ ಸಂದ ಪ್ರಶಸ್ತಿ ಇದಾಗಿದೆ’ ಎಂದುರಾಯಲ್‌ ಸ್ವೀಡಿಷ್‌ ವಿಜ್ಞಾನ ಅಕಾಡೆಮಿಯ ಪ್ರಧಾನ ಕಾರ್ಯ
ದರ್ಶಿ ಗೊರನ್‌ ಹನ್‌ಸ್ಸನ್‌ ಹೇಳಿಕೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

1970ರಲ್ಲಿ ತೈಲ ಸಮಸ್ಯೆ ಎದುರಾದಾಗ ವಿಟ್ಟಿಂಗ್‌ಹ್ಯಾಮ್‌ ಅವರು ರಿಚಾರ್ಜ್‌ ಮಾಡಬಹುದಾದ ಬ್ಯಾಟರಿ ಕುರಿತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ.

ಬಹುಮಾನದ ಮೊತ್ತವು ಒಂಬತ್ತು ದಶಲಕ್ಷ ಕ್ರೊನಾರ್‌ ಆಗಿದ್ದು (ಸುಮಾರು ₹65.1 ಕೋಟಿ) ಸ್ಟಾಕ್‌ಹೋಮ್‌ನಲ್ಲಿ ಡಿಸೆಂಬರ್‌ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಾಹಿತ್ಯ ಕ್ಷೇತ್ರಕ್ಕೆ ನೀಡುವ ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಗುರುವಾರ ಪ್ರಕಟಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.