ಸ್ಟಾಕ್ಹೋಮ್: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮೊತ್ತವನ್ನು ನೊಬೆಲ್ ಫೌಂಡೇಶನ್ ಹೆಚ್ಚಳ ಮಾಡಿದೆ.
ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್‌ನಿಂದ 11 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಪ್ರಶಸ್ತಿ ಪುರಸ್ಕೃತರು ಭಾರತೀಯ ರೂಪಾಯಿಯಲ್ಲಿ ₹ 8.19 ಕೋಟಿ ಪಡೆಯಲಿದ್ದಾರೆ.
ಪ್ರಶಸ್ತಿ ಮೊತ್ತದ ಹೆಚ್ಚಳ ನಿರ್ಧಾರವು ಫೌಂಡೇಶನ್‌ನ ಹಣಕಾಸು ದಕ್ಷತೆ ಹೆಚ್ಚಾಗಿರುವುದನ್ನು ತೋರಿಸುತ್ತದೆ ಎಂದು ನೊಬೆಲ್ ಫೌಂಡೇಶನ್ ಶುಕ್ರವಾರ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಫೌಂಡೇಶನ್ ಹಣಕಾಸು ಸಾಮರ್ಥ್ಯ ಕುಸಿದಾಗ ಪ್ರಶಸ್ತಿ ಮೊತ್ತ ಏರಿಳಿತ ಕಂಡಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಮೊತ್ತಕ್ಕೆ ಹೆಚ್ಚಿಸಲಾಗಿದೆ.
2010 ರಲ್ಲಿ ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್‌ನಿಂದ 8 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಇಳಿಸಲಾಗಿತ್ತು. 2017 ರಲ್ಲಿ 9 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ, 2020 ರಲ್ಲಿ 10 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಹೆಚ್ಚಳ ಮಾಡಲಾಗಿತ್ತು.
ಅದಾಗ್ಯೂ ಇತ್ತೀಚಿನ ದಶಕಗಳಲ್ಲಿ ಯುರೊ ಎದುರು ಸ್ವೀಡಿಶ್ ಕ್ರೌನ್ ಶೇ 30 ರಷ್ಟು ಮೌಲ್ಯವನ್ನು ಕಳೆದುಕೊಂಡಿರುವುದರಿಂದ ಸ್ವೀಡಿಶ್ ಹೊರತುಪಡಿಸಿ ಹೊರಗಿನವರಿಗೆ ಮೊತ್ತ ಹೆಚ್ಚಳದ ಲಾಭ ದಕ್ಕುವುದಿಲ್ಲ. ಅಕ್ಟೋಬರ್‌ನಲ್ಲಿ 2023ರ ನೊಬೆಲ್ ಪ್ರಶಸ್ತಿಗಳು ಪ್ರಕಟಗೊಳ್ಳುತ್ತವೆ ಎಂದು ಫೌಂಡೇಶನ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.